ಕಳೆದ 10 ವರ್ಷಗಳಿಂದ ಅಕ್ಷರ ಅಭಿಯಾನ ನಡೆಸುತ್ತಿರುವ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರು ಈವರೆಗೆ 50 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಓದುಗರಿಗೆ ಹಂಚಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ 38 ಸಾವಿರದಷ್ಟು ಭಗವದ್ಗೀತೆಯ ಪುಸ್ತಕವನ್ನು ಅವರು ಓದುಗರಿಗೆ ಉಚಿತವಾಗಿ ವಿತರಿಸಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಸಹ ಅವರು ಭಗವದ್ಗೀತಾ ಅಭಿಯಾನ ನಡೆಸಿದ್ದಾರೆ.
ಶಿವಲಿಂಗಯ್ಯ ಅವರು ಮೂಲತ: ಬೆಳಗಾವಿಯ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದವರು. ಅವರ ತಂದೆ ಯಲ್ಲಾಪುರದಲ್ಲಿ ಬಿದಿರು ಗುತ್ತಿಗೆದಾರರಾಗಿದ್ದರು. ಯಲ್ಲಾಪುರದ ಸೌಂದರ್ಯದ ಬಗ್ಗೆ ತಂದೆಯವರ ಮಾತು ಕೇಳಿ ಪ್ರೇರೆಪಿತರಾದ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರು ಪ್ರಸ್ತುತ ಯಲ್ಲಾಪುರಕ್ಕೆ ಆಗಮಿಸಿದ್ದು, ಗುತ್ತಿಗೆದಾರರಾಗಿ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ತಮ್ಮ ಆದಾಯದ ಒಂದು ಭಾಗವನ್ನು ಅವರು ಜ್ಞಾನ ವೃದ್ಧಿಗಾಗಿ ಮೀಸಲಿಟ್ಟಿದ್ದು, ಬಡವ-ಶ್ರೀಮಂತ, ಸಣ್ಣವ-ದೊಡ್ಡವ ಎಂಬ ಬೇದವಿಲ್ಲದೇ ಆಸಕ್ತರಿಗೆಲ್ಲರಿಗೂ ಪುಸ್ತಕ ಉಡುಗರೆ ನೀಡುತ್ತಿದ್ದಾರೆ.
ಶಿವಲಿಂಗಯ್ಯ ಅಲ್ಲಯನವರಮಠ ಅವರು ದೇಶದ ನಾನಾ ಭಾಗಗಳ ಪ್ರವಾಸದಲ್ಲಿರುತ್ತಾರೆ. ಪ್ರವಾಸಕ್ಕೆ ಹೋಗುವಾಗಲೆಲ್ಲ ತಮ್ಮೊಂದಿಗೆ ಭಗವದ್ಗೀತೆಯ ಪುಸ್ತಕವನ್ನು ಒಯ್ಯುತ್ತಾರೆ. ಎದುರು ಸಿಕ್ಕವರನ್ನು ಪ್ರೀತಿಯಿಂದ ಮಾತನಾಡಿಸಿ, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆಧ್ಯಾತ್ಮ ಹಾಗೂ ಹಿಂದೂ ಧರ್ಮದ ಬಗ್ಗೆ ಕಾಳಜಿ ಇದ್ದವರಿಗೆ ತಮ್ಮಲ್ಲಿರುವ ಪುಸ್ತಕಗಳನ್ನು ಹಂಚುತ್ತಾರೆ. ಪುಸ್ತಕ ಖಾಲಿ ಆದ ನಂತರ ಉತ್ತರ ಪ್ರದೇಶದ ಗೋರಖಪುರದಲ್ಲಿರುವ ಗೀತಾ ಪ್ರೆಸ್’ನಿಂದ ಮತ್ತೆ ಅದನ್ನು ತರಿಸಿ ಜ್ಞಾನ ಹಂಚುವ ಕಾಯಕ ಮಾಡುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಮುದ್ರಿತವಾದ ಪುಸ್ತಕಗಳನ್ನು ಅವರು ಹಂಚಿದ್ದಾರೆ.
ಅಲ್ಲಮ್ಮನಪ್ರಭು ಅನುಯಾಯಿಯಾಗಿದ್ದ ಶಿವಲಿಂಗಯ್ಯ ಅಲ್ಲಯನಮಠ ಅವರು ಮೊದಲು ಅಲ್ಲಮ್ಮಪ್ರಭು ವಚನದ ಪುಸ್ತಕಗಳನ್ನು ಹಂಚುತ್ತಿದ್ದರು. ಆಪ್ತರ ಸಲಹೆ ಮೇರೆಗೆ ಕಳೆದ 6 ವರ್ಷಗಳಿಂದ ಅಲ್ಲಮ್ಮಪ್ರಭು ವಚನದ ಪುಸ್ತಕಗಳ ಜೊತೆ ಭಗವದ್ಗೀತೆಯ ಪುಸ್ತಕಗಳನ್ನು ಹಂಚುತ್ತಿದ್ದಾರೆ. ಇದರೊಂದಿಗೆ 10 ಸಾವಿರದಷ್ಟು ಶಿವಶರಣರ ಚಿತ್ರಶಿರ್ಷಿಕೆ, ಅನುಭವ ಮಂಟಪ ಕಲ್ಪನೆಯ ಚಿತ್ರಪಟಗಳನ್ನು ಅವರು ಜನರ ಕೈಗಿಟ್ಟಿದ್ದಾರೆ.
ಪ್ರಸ್ತುತ ಅವರು ಹಂಚುತ್ತಿರುವ ಭಗವದ್ಗೀತೆಯ ಒಂದು ಪುಸ್ತಕಕ್ಕೆ 25ರೂ ದರವಿದೆ. ಇನ್ನೊಂದು ಪುಸ್ತಕಕ್ಕೆ 230ರೂ ಬೆಲೆಯಿದೆ. ತಮ್ಮ ಆದಾಯದಿಂದಲೇ ಆ ಪುಸ್ತಕಗಳನ್ನು ಖರೀದಿಸುವ ಅವರು ಹಿಂದೂ ಧರ್ಮ ಪ್ರಸಾರಕ್ಕಾಗಿ ಸದ್ದಿಲ್ಲದೇ ಸೇವೆ ಮಾಡುತ್ತಿದ್ದಾರೆ.