ಕಾರವಾರ: ಕಳೆದ ಎಂಟು ವರ್ಷಗಳಿಂದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಗೆ ಪೂರ್ಣಾವಧಿ ಅಧಿಕಾರಿಗಳಿಲ್ಲ. ಆಗಾಗ ನಿವೃತ್ತಿ ಅಂಚಿನಲ್ಲಿರುವವರನ್ನು ಸರ್ಕಾರ ಈ ಇಲಾಖೆಗೆ ನೇಮಿಸುತ್ತಿದ್ದು, ವರ್ಷ ಕಳೆಯುವದರೊಳಗೆ ಆ ಹುದ್ದೆ ಖಾಲಿಯಾಗುತ್ತಿದೆ. ಇದರಿಂದ ಹಿರಿಯ ನಾಗರಿಕರು ತಮ್ಮ ಕೆಲಸ ಕಾರ್ಯಗಳಿಗೆ ಅನಗತ್ಯ ಅಲೆದಾಟ ನಡೆಸುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಅಧೀನದಲ್ಲಿ ಹಿರಿಯ ನಾಗರಿಕರ ಇಲಾಖೆಯೂ ಬರುತ್ತದೆ. ವಿಕಲಚೇತನರಿಗೆ ಸಹ ಇದೇ ಇಲಾಖೆ ಆಸರೆ. ಅದಾಗಿಯೂ ಸರ್ಕಾರ ಈ ಇಲಾಖೆಗೆ ಸಮರ್ಥ ಅಧಿಕಾರಿಗಳ ನೇಮಕಕ್ಕೆ ಆಸಕ್ತಿ ತೋರಿಲ್ಲ. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಅಧಿಕಾರಿಯಾಗಿ ಲಲಿತಾ ಪಟಗಾರ್ ಎಂಬಾತರು ಈ ಇಲಾಖೆಯ ಅಧಿಕಾರವಹಿಸಿಕೊಂಡು ವರ್ಷದೊಳಗೆ ನಿವೃತ್ತರಾದರು. ಅದಾದ ಮೇಲೆ ಗಂಗಪ್ಪ ಎಂಬಾತರು ಆಗಮಿಸಿ ವರ್ಷದೊಳಗೆ ವರ್ಗಾವಣೆಯಾದರು. ಅದಾದ ನಂತರ ಸತೀಶ ನಾಯ್ಕ ಎಂಬಾತರು ಆಗಮಿಸಿದ್ದು, ಅವರು ವರ್ಷದೊಳಗೆ ನಿವೃತ್ತಿ ಹೊಂದಿದರು. ನಂತರ ಈ ಸ್ಥಾನಕ್ಕೆ ಶಿಲ್ಪಾ ದೊಡ್ಮನಿ ಎಂಬಾತರು ಆಗಮಿಸಿದ್ದು ಅವರನ್ನು ಸಹ ವರ್ಷದೊಳಗೆ ಸರ್ಕಾರ ವರ್ಗಾಯಿಸಿತು. ಪ್ರಸ್ತುತ ರಾಘವೇಂದ್ರ ಭಟ್ಟ ಎಂಬಾತರು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಅಧಿಕಾರಿಯಾಗಿದ್ದು, ಅವರು ಬೇರೆ ಬೇರೆ ಇಲಾಖೆಯ ಮೂರು ಕಡೆ ಪ್ರಭಾರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.
ಅಂಕೋಲಾ ಸೇರಿ ಮೂರು ಕಡೆ ಪ್ರಭಾರಿಯಾಗಿರುವ ಕಾರಣ ರಾಘವೇಂದ್ರ ಭಟ್ಟ ಅವರು ಸಹ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಸಿಗುತ್ತಿಲ್ಲ. ಹೀಗಾಗಿ ಹಿರಿಯ ನಾಗರಿಕರು ಸಮಸ್ಯೆ ಹೇಳಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದು, ಸಮಸ್ಯೆಗೆ ಸ್ಪಂದಿಸುವವರೇ ಇಲ್ಲವಾಗಿದೆ. ಈ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಪೂರ್ಣಾವಧಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಅಧಿಕಾರಿ ನೇಮಕಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತದ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಈ ಬಗ್ಗೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಹಿರಿಯ ನಾಗರಿಕ ಜೋನ್ ಬೇರೆಟ್ಟ್ ಹಾಗೂ ಈಶ್ವರ್ ನಾಯ್ಕ ಹಾಜರಿದ್ದು ಸಮಸ್ಯೆ ವಿವರಿಸಿದರು.
ಕೇಂದ್ರದವರು ಈ ಬಗ್ಗೆ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..