ನದಿ, ಸಮುದ್ರ ಹಾಗೂ ಅರಳಿ ಮರದ ಕೆಳಗೆ ಬಿದ್ದಿರುವ ವಿಘ್ನ ದೇವರ ಮೂರ್ತಿ ಹಾಗೂ ಫೋಟೋಗಳನ್ನು ಯುವಾ ಬ್ರಿಗೆಡ್ ಕಾರ್ಯಕರ್ತರು ಆರಿಸಿ ವೈಜ್ಞಾನಿಕವಾಗಿ ಮುಕ್ತಿ ನೀಡುತ್ತಿದ್ದಾರೆ. ದೇವರ ಫೋಟೋದಲ್ಲಿನ ಗಾಜು, ಕಟ್ಟಿಗೆ ಪ್ರೇಮು ಹಾಗೂ ಭಾವಚಿತ್ರಗಳನ್ನು ಪ್ರತ್ಯೇಕಿಸಿ ಅವುಗಳನ್ನು ಮರುಬಳಕೆ ಮಾಡುವುದು ಸ್ವಯಂ ಸೇವಕರ ಮುಖ್ಯ ಕಾಯಕ. ದೇವರ ಚಿತ್ರ ಹಾಗೂ ಕಟ್ಟಿಗೆ ಪ್ರೇಮುಗಳನ್ನು ಮಣ್ಣಿನ ಅಡಿ ಹೂತು ಅದರ ಮೇಲೆ ಗಿಡ ನೆಡುತ್ತಾರೆ. ಫೋಟೋ ಜೊತೆ ಸಿಗುವ ಗಾಜುಗಳನ್ನು ಪುನರ್ ಬಳಕೆ ಮಾಡುವವರಿಗೆ ಹಸ್ತಾಂತರಿಸುತ್ತಾರೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ `ಕಣ ಕಣದಲ್ಲಿಯೂ ಶಿವ’ ಎಂಬ ಕೆಲಸ ನಡೆಯುತ್ತಿದೆ. ಯುವಾ ಬ್ರಿಗೆಡ್ ತಂಡದವರು ರಾಜ್ಯದ ಎಲ್ಲಾ ಭಾಗದಲ್ಲಿಯೂ ತಮ್ಮ ಬಿಡುವಿನ ವೇಳೆ ಈ ಕೆಲಸ ಆಯೋಜಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷಕ್ಕೆ ಮೂರು ಬಾರಿ ಈ ಪರಿಸರ ಸ್ನೇಹಿ ಕೆಲಸದಲ್ಲಿ 150ಕ್ಕೂ ಅಧಿಕ ಜನ ತೊಡಗಿಸಿಕೊಳ್ಳುತ್ತಾರೆ. ಪ್ರತಿ ಬಾರಿ ಸ್ವಚ್ಚ ಮಾಡಿದ ನಂತರವೂ ಮತ್ತೆ ಮೂರು ತಿಂಗಳ ಅವಧಿಯಲ್ಲಿ ಅಷ್ಟೇ ಪ್ರಮಾಣದ ದೇವರ ಫೋಟೋಗಳು ಅದೇ ಅರಳಿ ಮರ, ನದಿ ತೀರದಲ್ಲಿ ಕಾಣಿಸುತ್ತದೆ. ಅದಾಗಿಯೂ ಬೇಸರಿಸಿಕೊಳ್ಳದೇ ಸ್ವಯಂ ಸೇವಕರು ಅವುಗಳಿಗೆ ವೈಜ್ಞಾನಿಕ ಮುಕ್ತಿ ನೀಡುವ ಕಾಯಕ ಮಾಡುತ್ತ ಬಂದಿದ್ದಾರೆ.
`ಹಿ0ದೂ, ಮುಸ್ಲಿಂ, ಕ್ರೆಸ್ತ ಸೇರಿ ಎಲ್ಲಾ ಧರ್ಮಿಯರು ಮನೆಯಲ್ಲಿ ಪೂಜಿಸಿದ ದೇವರ ಫೋಟೋಗಳನ್ನು ಬೀದಿ ಬೀದಿಯಲ್ಲಿ ಎಸೆಯುತ್ತಾರೆ. ಇದರಿಂದ ಆಯಾ ಧರ್ಮದ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಇದು ಪರಿಸರ ಮಾಲಿನ್ಯದ ಜೊತೆ ದೇವರಿಗೆ ಮಾಡುವ ಅಪಮಾನ. ಹರಿದ ಪಟ, ಭಿನ್ನಗೊಂಡ ದೇವರ ಮೂರ್ತಿಗಳನ್ನು ವೈಜ್ಞಾನಿಕವಾಗಿ ವಿಲೆವಾರಿ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಯುವಾ ಬ್ರಿಗೆಡ್ ಇಂಥ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ’ ಎಂದು ಸಂಘಟನೆಯ ಅಣ್ಣಪ್ಪ ನಾಯ್ಕ ವಿವರಿಸಿದರು.
ಈ ತಂಡದ ಸದಸ್ಯರು ಸಾವಿರಾರು ದೇವರ ಚಿತ್ರಗಳಿಗೆ ವೈಜ್ಞಾನಿಕವಾಗಿ ಮುಕ್ತಿ ನೀಡಿದ್ದಾರೆ. ಮಣ್ಣಿನಲ್ಲಿ ಮಣ್ಣಾಗುವ ಕಾಗದ ಹಾಗೂ ಕಟ್ಟಿಗೆಯ ಪ್ರೇಮುಗಳು ಗೊಬ್ಬರವಾಗಿವೆ. ಅದರ ಮೇಲೆ ಬೆಳೆದ ಗಿಡಗಳು ಮರವಾಗಿ ಫಸಲು ನೀಡುತ್ತಿವೆ. ನಿನ್ನೆ ಭಾನುವಾರ ಬೆಳಗ್ಗೆ 6.30ರಿಂದ ಕುಮಟಾದ ವನ್ನಳ್ಳಿಯಲ್ಲಿ ಫೋಟೋಗಳನ್ನು ಪ್ರತ್ಯೇಕಿಸುವ ಕೆಲಸಕ್ಕೆ ಯುವಾ ಬ್ರಿಗೆಡ್ ಸದಸ್ಯರು ಅಣಿಯಾದರು. 9.30ರವರೆಗೆ 300ಕ್ಕೂ ಅಧಿಕ ಫೋಟೋಗಳನ್ನು ಆರಿಸಿ ಪ್ರತ್ಯೇಕಿಸಿದರು. ಅದಾದ ನಂತರ ಎಲ್ಲರೂ ಅವರವರ ಕೆಲಸಕ್ಕೆ ತೆರಳಿದರು. ಭಾನುವಾರದ ರಜೆಯನ್ನು ಅನುಭವಿಸುವದರ ಜೊತೆ ತಮ್ಮದೇ ರೀತಿಯಲ್ಲಿ ದೇವರ ಸೇವೆ ಮಾಡಿದರು. ಮುಂದಿನ ಭಾನುವಾರ ಸಹ ಅವರು ಈ ಕಾಯಕ ಮುಂದುವರೆಸಲಿದ್ದಾರೆ.
ಈ ಕಾರ್ಯದ ಬಗ್ಗೆ ನಿಮಗೆ ಮೆಚ್ಚುಗೆ ಇದ್ದಲ್ಲಿ ಸ್ವಯಂ ಸೇವಕರನ್ನು ಅಭಿನಂದಿಸಿ. ಪುಣ್ಯ ಕಾರ್ಯದಲ್ಲಿ ನೀವು ಕೈ ಜೋಡಿಸಲು ಇಲ್ಲಿ ಫೋನ್ ಮಾಡಿ: 9620838938 / 9731695205