ಗ್ಯಾರಂಟಿ ಪರಿಣಾಮವೊ ಅಥವಾ ಮತ್ತೇನು ಕಾರಣವೊ. ಹೊಂಡಗಳ ಮಧ್ಯೆ ರಸ್ತೆ ಹುಡುಕುತ್ತ ಸಾಗಬೇಕಾದ ಸ್ಥಿತಿಯಿಂದ ಬಹುತೇಕ ಗ್ರಾಮೀಣ ಭಾಗದ ರಸ್ತೆಗಳೂ ಹೊರತಾಗಿಲ್ಲ.
ಸರ್ಕಾರದ ಇಲಾಖೆಗಳಲ್ಲಿ ಗೋಗರೆದರೆ ಯಾವ ಪ್ರಯೋಜನವಾಗದೇ ಬೇಸತ್ತು ಹೋದ ಕಥೆಗಳು ಊರೂರಿನಲ್ಲೂ ಕೇಳಲು ಸಿಗುತ್ತದೆ. ದುರಸ್ತಿಗಾಗಿ ಕಾದು ಕಾದು ಸುಸ್ತಾಗಿ ಜನರೇ ರಸ್ತೆ ದುರಸ್ತಿ ಮಾಡಿಕೊಳ್ಳುವ ಸ್ಥಿತಿಯೂ ಇದೆ. ಯಲ್ಲಾಪುರದ ಎಪಿಎಂಸಿಯಿಂದ ಗುಂಡ್ಕಲ್ ಗೆ ಹೋಗುವ ರಸ್ತೆಯ ಪರಿಸ್ಥಿತಿಯೂ ಇದೇ!
ಹೊಂಡಗಳಿಂದಲೇ ತುಂಬಿ, ವಾಹನಗಳು ಓಡಾಡಲೂ ಸಾಧ್ಯವಾಗದ ಸ್ಥಿತಿಯನ್ನು ಅರಿತು, ಗ್ರಾಮಸ್ಥರೇ ದುರಸ್ತಿಗೆ ಮುಂದಾಗಿದ್ದಾರೆ. ಎಪಿಎಂಸಿಯಿಂದ ಹಲಸಖಂಡ ಕ್ರಾಸ್ ವರೆಗೆ ಹೊಂಡಗಳಿಗೆ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿದ್ದಾರೆ.
ಸ್ಥಳೀಯರೇ ಐದಾರು ಜನ ಸೇರಿ ಕೆಲಕಾಲ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದ್ದಾರೆ. ಸರ್ಕಾರವೇ ರಸ್ತೆ ದುರಸ್ತಿ ಮಾಡುತ್ತದೆ ಎಂದು ಕಾಯುತ್ತ ಕುಳಿತರೆ, ವಾಹನ ಸವಾರರು ಬೀಳುತ್ತ ಏಳುತ್ತ ಸಾಗಬೇಕು. ಅದನ್ನು ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ನಾವೇ ದುರಸ್ತಿ ಮಾಡಿಕೊಂಡಿದ್ದೇವೆ ಎಂಬುದು ಸ್ಥಳೀಯರ ಅಭಿಪ್ರಾಯ.
ಕಳೆದ 3-4 ತಿಂಗಳುಗಳ ಹಿಂದೆ ಒಂದಷ್ಟು ಹೊಂಡಗಳನ್ನು ಮುಚ್ಚಿ ತೇಪೆ ಹಾಕುವ ಕಾರ್ಯ ಲೋಕೋಪಯೋಗಿ ಇಲಾಖೆಯಿಂದ ಆಗಿತ್ತು. ಇಲಾಖೆಗೆ ಸೇರಿದ ರಸ್ತೆಗೆ ಡಾಂಬರಿನ ಬದಲು ಮಣ್ಣೇ ಗತಿಯಾಗಿರುವುದು ವಿಪರ್ಯಾಸದ ಸಂಗತಿ.