ಯಲ್ಲಾಪುರ ತಾಲೂಕಿನಲ್ಲಿ ಕಳೆದ ನಾಲ್ಕು ದಿವಸಗಳಿಂದ ಸುರಿಯುತ್ತಿರುವ ಭಾರಿ ಮಳೆ ಅನಾಹುತಕ್ಕೆ ನಾಂದಿ ಹಾಡಿದೆ. ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಬೀಗಾರ- ಬಾಗಿನಕಟ್ಟಾ ರಸ್ತೆಯ ಪಕ್ಕ ಭೂಕುಸಿತ ಉಂಟಾಗಿದೆ.
ಬೀಗಾರ-ಬಾಗಿನಕಟ್ಟಾ ರಸ್ತೆಯ ಪಕ್ಕ ಪ್ರತಿ ವರ್ಷ ಭೂಕುಸಿತ ಆಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ರಸ್ತೆ ಸಂಪೂರ್ಣ ಕುಸಿದು, ಸಂಚಾರ ಬಂದ್ ಆಗಿತ್ತು.
ನಂತರ ಬದಲಿ ಸಿಮೆಂಟ್ ರಸ್ತೆ ಮಾಡಲಾಗಿತ್ತು. ಕಳೆದ ವರ್ಷ ಸಿಮೆಂಟ್ ರಸ್ತೆಯ ಪಕ್ಕದಲ್ಲೇ ಭೂಕುಸಿತವಾಗಿತ್ತು.
ಈ ಬಾರಿಯೂ ಇದೇ ಪ್ರದೇಶದಲ್ಲಿ ಭೂಕುಸಿತವಾಗಿದೆ. ಕಾಂಕ್ರೀಟ್ ರಸ್ತೆಯ ಅಡಿ ಭಾಗದ ಮಣ್ಣು ಕುಸಿದು, ರಸ್ತೆಯೇ ಕುಸಿಯುವ ಆತಂಕ ಎದುರಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೂಲ ಗ್ರಾಮ ನಕಾಶೆಯಂತೆ ನೀರಿನ ಹರಿವು ಇರಬೇಕು. ಬದಲಾವಣೆ ಆದಲ್ಲಿ ಗುಡ್ಡ ಕುಸಿತವಾಗುತ್ತದೆ. ಇದಕ್ಕೆ ಕಳೆದ ನಾಲ್ಕಾರು ವರ್ಷಗಳಿಂದ ನಡೆಯುತ್ತಿರುವ ಭೂಕುಸಿತವೇ ಸಾಕ್ಷಿಯಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತು ಆಯಾಯಾ ಪ್ರದೇಶದ ನೀರಿನ ಹರಿವು ಮೂಲ ಗ್ರಾಮ ನಕಾಶೆಯಲ್ಲಿದ್ದಂತೆ ಹಳ್ಳ ಸೇರುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಶಿವರಾಮ ಗಾಂವ್ಕರ ಕಲ್ಮನೆ ಆಗ್ರಹಿಸಿದ್ದಾರೆ