ಹಳಿಯಾಳ: 1 ಸಾವಿರ ರೂಪಾಯಿಗೂ ಹೆಚ್ಚು ಖರೀದಿ ಮಾಡಿದವರಿಗೆ `ಲಕ್ಕಿ ಡ್ರಾ’ ಬಹುಮಾನ ಘೋಷಿಸಿದ್ದ `ರಾಯಲ್ ಸಿಟಿ ಮಾರ್ಟಿ’ನ ಮಾಲಕ ಹಾಗೂ ವ್ಯವಸ್ಥಾಪಕರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ಟೊಬರ್ 21ರಂದು ಸಂಜೆ 6 ಗಂಟೆಗೆ `ರಾಯಲ್ ಸಿಟಿ ಮಾರ್ಟ’ನ ಸಾಮಾಜಿಕ ಜಾಲತಾಣದಲ್ಲಿ `ಪ್ರತಿ 1 ಸಾವಿರ ರೂ ಮೇಲ್ಪಟ್ಟ ಖರೀದಿಗೆ ಲಕ್ಕಿ ಡ್ರಾ ಕೂಪನ್’ ಎಂಬ ವಿಷಯ ಪ್ರಸಾರವಾಗಿತ್ತು. ಒಟ್ಟು 10 ಸಾವಿರ ಲಕ್ಕಿ ಡ್ರಾ ಕೂಪನ್ ಇರುವ ಬಗ್ಗೆ ಅದರಲ್ಲಿ ಬರೆಯಲಾಗಿತ್ತು. `ಅಕ್ಟೊಬರ್ 26ರಿಂದ 30ರವರೆಗೆ ಮಾತ್ರ ಈ ಕೊಡುಗೆ’ ಎಂದು ಪ್ರಚಾರ ಮಾಡಲಾಗಿತ್ತು. ಇದನ್ನು ಪೊಲೀಸ್ ಸಿಬ್ಬಂದಿ ಉಮೇಶ ಹನಂಗಡಿ ನೋಡಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
`ಲಕ್ಕಿ ಡ್ರಾ’ ಹೆಸರಿನಲ್ಲಿ ಅನಧಿಕೃತ ಲಾಟರಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ಈ ಬಗ್ಗೆ ಅರಿವಿದ್ದರೂ ಜನರಿಗೆ ಆಮೀಷ ಒಡ್ಡಿ ಉತ್ಪನ್ನ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡರು.