ಕುಮಟಾ: ದೀಪಾವಳಿ ಹಬ್ಬ ವೇಳೆ ಪಪ್ಪಾಯಿ ಹಣ್ಣಿನಿಂದ ಪರಸ್ಪರ ಹೊಡೆದಾಟ ನಡೆಸುವ ವಿಶೇಷ ಆಟ ಕುಮಟಾದ ಬೀದಿ ಬೀದಿಗಳಲ್ಲಿ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ಈ ಆಟ ನಡೆಯುತ್ತಿದ್ದು, ನೂರಾರು ಜನ ನೋಡಲು ಆಗಮಿಸುತ್ತಿದ್ದಾರೆ.
ಜಾನಪದ ಕಲೆಗಳಲ್ಲಿ ಒಂದಾದ ಇದಕ್ಕೆ `ಹೊಂಡೆ ಆಟ’ ಎಂದು ಹೆಸರು. ದೀಪಾವಳಿ ಹೊರತುಪಡಿಸಿ ಬೇರೆ ದಿನದಲ್ಲಿ ಇದನ್ನು ಆಡುವ ಹಾಗಿಲ್ಲ ಎಂಬುದು ಇಲ್ಲಿನ ನಿಯಮ!
ಕಂಬಳಿಯಲ್ಲಿ ಅಡಗಿ ಕುಳಿತವನಿ ಆತನ ಎದುರು ಇರುವ ಇನ್ನೊಬ್ಬ ಕವಣೆ ಬೀಸುವ ಮೂಲಕ ಪಪ್ಪಾಯಿ ಹಣ್ಣಿನಿಂದ ಹೊಡೆಯಬೇಕು. ಗುರಿ ತಪ್ಪಿದರೆ ಪಪ್ಪಾಯಿ ಬೀಸಿದವ ಆಟದಲ್ಲಿ ಸೋತಂತೆ. ಆಗ ಗೆದ್ದವನ ಪಾಳಿ ಶುರುವಾಗಲಿದ್ದು, ಆತನೂ ಇದೇ ರೀತಿ ಆಟ ಮುಂದುವರೆಸಬೇಕು.
ಕೊಮಾರಪಂತ, ಹಾಲಕ್ಕಿ, ಪಟಗಾರ, ಮುಕ್ರಿ ಹಾಗೂ ಉಪ್ಪಾರ ಸಮಾಜದವರು ತಲತಲಾಂತರಗಳಿoದ ಈ ಆಟ ಆಡುತ್ತ ಬಂದಿದ್ದಾರೆ. ಹೀಗಾಗಿ ಮೊದಲಿನಿಂದಲೂ ದೀಪಾವಳಿ ಹಬ್ಬದ ವೇಳೆ ಪಪ್ಪಾಯಿ ಹಣ್ಣಿಗೆ ಬೇಡಿಕೆಯೂ ಹೆಚ್ಚಿದೆ.




