ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ ಕಳ್ಳನ ಕಾಟ; ಮಹಿಳೆಯ ಹಾಸಿಗೆಯೊಳಗೆ ನುಸುಳಿದ ಖದೀಮ!
ಹಾವೇರಿ: ನಗರದ ಜಿಲ್ಲಾಸ್ಪತ್ರೆಯ ವಾರ್ಡ್ನಲ್ಲಿ ಮಧ್ಯರಾತ್ರಿ ಕಳ್ಳನೊಬ್ಬ ವಿಚಿತ್ರ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಪಕ್ಕದಲ್ಲೇ ಮಲಗಿ, ಆಕೆಯ ಮೊಬೈಲ್ ಹಾಗೂ ಪರ್ಸ್ ಕದಿಯಲು ಯತ್ನಿಸಿರುವ ಘಟನೆ ಆಸ್ಪತ್ರೆಯ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.
ಡಿ.15ರಂದು ಜಿಲ್ಲಾಸ್ಪತ್ರೆಯ ವಾರ್ಡ್ ನಂಬರ್ 109ರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾಲು ಮುರಿತದ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯಿದ್ದ ವಾರ್ಡ್ನ್ನೇ ಕಳ್ಳ ಟಾರ್ಗೆಟ್ ಮಾಡಿದ್ದಾನೆ.

ಮೊದಲು ಮಹಿಳೆ ಮಲಗಿದ್ದ ಹಾಸಿಗೆಯ ಕೆಳಗೆ ಅವಿತು ಕುಳಿತಿದ್ದ ಖದೀಮ, ಬಳಿಕ ಯಾರಿಗೂ ತಿಳಿಯದಂತೆ ಮೆಲ್ಲನೆ ಹಾಸಿಗೆಯೊಳಗೆ ನುಸುಳಿದ್ದಾನೆ. ಮಹಿಳೆಯ ಮೈಮೇಲಿದ್ದ ಹಾಸಿಗೆಯನ್ನೇ ಹೊದ್ದು ಮೊಬೈಲ್ ಹಾಗೂ ಪರ್ಸ್ ಕದಿಯಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಧ್ಯರಾತ್ರಿ ಆಸ್ಪತ್ರೆಯ ವಾರ್ಡ್ನಲ್ಲೇ ನಡೆದಿರುವ ಈ ವಿಚಿತ್ರ ಕೃತ್ಯ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಹಾಗೂ ಅವರ ಸಂಬಂಧಿಕರ ವಸ್ತುಗಳ ಸುರಕ್ಷತೆ ಕುರಿತು ಗಮನಹರಿಸುವ ಅಗತ್ಯವಿದೆ.







