ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ವೈದ್ಯಕೀಯ ವರದಿಗಳ ಪ್ರಕಾರ 1019 ಮಕ್ಕಳಲ್ಲಿ ಹೃದಯ ಸಂಬoಧಿ ದೋಷಗಳು ಕಾಣಿಸಿಕೊಂಡಿದೆ.
ರಾಷ್ಟ್ರೀಯ ಬಾಲ ಸ್ವಾಸ್ತ್ರ ಕಾರ್ಯಕ್ರಮದ ಅಡಿ 18 ವರ್ಷದ ಒಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ವೈದ್ಯರು ಶಿಬಿರ ನಡೆಸುತ್ತಿದ್ದಾರೆ. 2023ರಿಂದ 2024ರ ಅಕ್ಟೊಬರ್’ವರೆಗೆ 4.4 ಲಕ್ಷ ಮಕ್ಕಳ ವೈದ್ಯಕೀಯ ತಪಾಸಣೆ ನಡೆದಿದೆ. ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಪೈಕಿ 55 ವಿದ್ಯಾರ್ಥಿಗಳಿಗೆ ಶಸ್ತ್ರ ಚಿಕಿತ್ಸೆ ನಡೆದಿದೆ. ಇನ್ನೂ 203 ಮಕ್ಕಳಿಗೆ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. 168 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸದೇ, ಔಷಧಿ ಹಾಗೂ ಇತರ ಚಿಕಿತ್ಸೆಗಳ ಮೂಲಕ ರೋಗ ಗುಣಪಡಿಸುವ ಬಗ್ಗೆ ಅಂಕಿ-ಅoಶಗಳು ಮಾಹಿತಿ ನೀಡಿವೆ.
2024ರ ಏಪ್ರಿಲ್’ನಿಂದ ಅಕ್ಟೊಬರ್ ಅಂತ್ಯದವರೆಗೆ ನಡೆದ ತಪಾಸಣೆಯಲ್ಲಿ 555 ಮಕ್ಕಳು ಗಂಭೀರ ಪ್ರಮಾಣದ ಹೃದಯ ಸಂಬoಧಿ ರೋಗದಿಂದ ಬಳಲುತ್ತಿದ್ದಾರೆ. ಈ ಪೈಕಿ ಹುಟ್ಟುವಾಗಲೇ ಹೃದಯ ಸಮಸ್ಯೆ ಹೊಂದಿದ ಮಕ್ಕಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. `ಭ್ರೂಣಾವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದ ಹೃದಯ ರೋಗ ಬಂದಿರಬಹುದು’ ಎಂಬುದು ತಜ್ಞ ವೈದ್ಯರ ಅಭಿಪ್ರಾಯ.
`ಭ್ರೂಣಾವಸ್ಥೆಯಲ್ಲಿ ಹೃದಯದ ಬೇರೆ ಬೇರೆ ಭಾಗಗಳು ಬೆಳವಣಿಗೆ ಹೊಂದುವಾಗ ಉಂಟಾಗುವ ಸಮಸ್ಯೆಯಿಂದ ಹೃದಯ ಕಾಯಿಲೆ ಕಾಣಿಸುತ್ತದೆ. ಹೃದಯದಲ್ಲಿ ತೂತು ಹೆಚ್ಚು ಮಕ್ಕಳಲ್ಲಿ ಕಾಣುತ್ತಿದೆ. ಅತ್ತಾಗ ಮೈ ಬಣ್ಣ ಬದಲಾಗುವುದು, ಆಡುವಾಗಿ ಬೇಗ ಸುಸ್ತಾಗುವುದು, ಹಗಲಿನಲ್ಲಿ ಕೆಮ್ಮು-ನೆಗಡಿ ರೋಗದ ಲಕ್ಷಣ. ಪ್ರಾಥಮಿಕ ಹಂತದಲ್ಲಿಯೇ ಈ ಸಮಸ್ಯೆಯಿಂದ ಹೊರಬರುವುದು ಉತ್ತಮ’ ಎಂಬುದು ಕ್ರಿಮ್ಸ’ನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಮರೋಳ ಅವರ ಅಭಿಪ್ರಾಯ.
ನರ ದೌರ್ಬಲ್ಯದ ಮಕ್ಕಳು ಅಧಿಕ
ಮಕ್ಕಳ ಆರೋಗ್ಯ ತಪಾಸಣೆಯ ವೇಳೆ 410 ಮಕ್ಕಳಲ್ಲಿ ನರ ಸಂಬoಧಿ ದೌರ್ಬಲ್ಯಗಳು ಕಾಣಿಸಿಕೊಂಡಿದೆ. ಆ ಪೈಕಿ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಇಬ್ಬರಿಗೆ ಚಿಕಿತ್ಸೆ ನೀಡಲಾಗಿದೆ. 21 ಮಕ್ಕಳು ಸೀಳು ತುಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇದರೊಂದಿಗೆ ಹಲ್ಲು, ಕಣ್ಣು, ಚರ್ಮ ರೋಗ ಸೇರಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. `5 ಲಕ್ಷ ರೂ ಒಳಗಿನ ಮಕ್ಕಳ ಚಿಕಿತ್ಸೆ ಸರ್ಕಾರದ ಜವಾಬ್ದಾರಿ. ಅಂಥ ಪ್ರಕರಣಗಳಿದ್ದರೆ ಉಚಿತವಾಗಿ ಚಿಕಿತ್ಸೆ ಕೊಡಲಾಗುತ್ತದೆ’ ಎಂದು ಡಿಎಚ್‌ಓ ಡಾ ನಿರೀಜ್ ಬಿವಿ ಹೇಳಿದ್ದಾರೆ.