ಹೊನ್ನಾವರ: ಇಲ್ಲಿನ ಹಳೆಯ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿ ಸದ್ಯ ಮೂರು ಇಲಾಖೆ ಹಾಗೂ ಒಂದು ಸಂಘದ ಕಚೇರಿಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಈ ನಾಲ್ಕು ಕಚೇರಿಯವರು ವಿದ್ಯುತ್ ಬಿಲ್ ಪಾವತಿ ವಿಷಯದಲ್ಲಿ ಕಚ್ಚಾಡುತ್ತಿದ್ದಾರೆ!
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಹಾಗೂ ಪಿಡಿಓ ಸಂಘದವರು ಕಚೇರಿ ಹೊಂದಿದ್ದ ಕಟ್ಟಡಕ್ಕೆ ಒಂದೇ ಒಂದು ವಿದ್ಯುತ್ ಮೀಟರ್ ಇದೆ. ಎಲ್ಲಾ ಕಚೇರಿಯವರು ಆ ವಿದ್ಯುತ್ ಮೀಟರ್ ಮೂಲಕ ಬರುವ ವಿದ್ಯುತ್ ಬಳಸುತ್ತಿದ್ದಾರೆ. ಆದರೆ, ಕಳೆದ ಮಾರ್ಚಿನಿಂದ ಯಾರೂ ವಿದ್ಯುತ್ ಬಿಲ್ ಪಾವತಿಸಿಲ್ಲ.
`ಸಮಾಜ ಕಲ್ಯಾಣ ಇಲಾಖೆಯವರು ಏರ್ ಕಂಡಿಶನ್ ಬಳಸುತ್ತಾರೆ. ಹೀಗಾಗಿ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತಿದ್ದು, ಅವರೇ ಅದನ್ನು ಪಾವತಿಸಬೇಕು’ ಎಂದು ಹಿಂದೂಳಿದ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. `ಕಳೆದ ವರ್ಷ ನಾವು ವಿದ್ಯುತ್ ಬಿಲ್ ಪಾವತಿಸಿದ್ದೇವೆ. ಈ ಬಾರಿ ಬೇರೆಯವರು ಪಾವತಿಸಲಿ’ ಎಂದು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯವರು ವಾದಿಸುತ್ತಾರೆ.
`ನಮ್ಮದು ಮಾಹಿತಿ ಕೇಂದ್ರ ಮಾತ್ರ. ವಿದ್ಯುತ್ ಬಿಲ್ ಪಾವತಿಗೆ ಹಣವಿಲ್ಲ’ ಎಂದು ಅಲ್ಪಸಂಖ್ಯಾತರ ಇಲಾಖೆಯವರ ಮಾತು. `ನಾವು ಈಚೆಗಷ್ಟೇ ಕಚೇರಿ ಶುರು ಮಾಡಿದ್ದು, ಲೈಟ್ ಬಿಟ್ಟು ಬೇರೆನೂ ಬಳಸಲ್ಲ. ಹೀಗಿರುವಾಗ ದುಬಾರಿ ವಿದ್ಯುತ್ ಬಿಲ್ ನಮಗೆ ಹೊರೆ’ ಎಂಬುದು ಪಿಡಿಓ ಸಂಘ ಕಚೇರಿಯವರ ನಿಲುವು.
ಪ್ರಸ್ತುತ ಮೂರು ಇಲಾಖೆ ಹಾಗೂ ಒಂದು ಸಂಘದ ಕಚೇರಿ ಹೊಂದಿರುವ ಹಳೆ ತಹಶೀಲ್ದಾರ್ ಕಟ್ಟಡದ ವಿದ್ಯುತ್ ಬಿಲ್ ಪಾವತಿಸುವವರು ಯಾರು? ಎಂಬ ಪ್ರಶ್ನೆ ಉದ್ಬವಿಸಿದೆ. ಈ ನಾಲ್ಕು ಕಚೇರಿಯದ್ದು ಸೇರಿ ಮಾರ್ಚ ತಿಂಗಳಿನಿ0ದ ಈವರೆಗೆ 28912ರೂ ವಿದ್ಯುತ್ ಬಿಲ್ ಬಾಕಿಯಿದೆ. ಅದನ್ನು ಹೆಸ್ಕಾಂ’ಗೆ ಪಾವತಿಸುವಲ್ಲಿ ಈ ಕಚೇರಿಯ ಅಧಿಕಾರಿಗಳು ಕಚ್ಚಾಟ ನಡೆಸುತ್ತಿದ್ದಾರೆ. `ಸ್ಟೇಶನರಿ, ಕಂಪ್ಯುಟರ್ ರಿಪೇರಿ ಸೇರಿ ಸಾಕಷ್ಟು ಖರ್ಚುಗಳಿವೆ. ಅದರ ನಡುವೆ ಬೇರೆಯವರು ಬಳಸಿದ ವಿದ್ಯುತ್’ಗೆ ನಾವು ಹಣ ಕೊಡಲ್ಲ’ ಎಂಬುದು ನಾಲ್ಕು ಕಚೇರಿಯವರ ಕೂಗು!
ಈ ವಿಷಯ ತಾಲೂಕು ಪಂಚಾಯತ ಸಭೆಯಲ್ಲಿಯೂ ಚರ್ಚೆ ನಡೆದಿದ್ದು, ಆಡಳಿತಾಧಿಕಾರಿ ವಿನೋದ ಅಣ್ವೇಕರ್ `ಎಲ್ಲಾ ಕಚೇರಿಗೂ ಪ್ರತ್ಯೇಕ ಮೀಟರ್ ಅಳವಡಿಸಿ ಸಮಸ್ಯೆ ಬಗೆಹರಿಸಿ’ ಎಂದು ಹೆಸ್ಕಾಂ’ಗೆ ಸೂಚಿಸಿದ್ದಾರೆ. ಆದರೆ, ಹಳೆಯ ಬಾಕಿ ಚುಕ್ತಾ ಮಾಡುವವರು ಯಾರು? ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ.