ವಾರದ ಐದು ದಿನ ನಾನಾ ಭಾಗಗಳಲ್ಲಿ ಭರತನಾಟ್ಯ ತರಗತಿ ನಡೆಸುವ ವಿನುತಾ ಹೆಗಡೆ ಅವರು ಭರತ ನಾಟ್ಯ ಕ್ಷೇತ್ರದಲ್ಲಿ 25 ವಸಂತಗಳನ್ನು ಪೂರೈಸಿದ್ದಾರೆ.
ಅಂಕೋಲಾ ತಾಲೂಕಿನ ಕಲ್ಲೇಶ್ವರದ ವಿನುತಾ ರಾಘವೇಂದ್ರ ಹೆಗಡೆ ಅವರು ಪ್ರತಿ ಭಾನುವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೊನ್ನಾವರದ ಕೆಳಗಿನಪಾಳ್ಯದಲ್ಲಿ ಭರತನಾಟ್ಯ ತರಗತಿ ನಡೆಸುತ್ತಾರೆ. ಮಧ್ಯಾಹ್ನ 4.30ಕ್ಕೆ ಅಂಕೋಲಾದ ವೆಂಕಟ್ರಮಣ ಮಠಕ್ಕೆ ಆಗಮಿಸಿ ಸಂಜೆ 6 ಗಂಟೆಯವರೆಗೂ ಮಕ್ಕಳಿಗೆ ನೃತ್ಯ ಅಭ್ಯಾಸ ಮಾಡಿಸುತ್ತಾರೆ. ಸೋಮವಾರ ಮಧ್ಯಾಹ್ನ 2.30ರಿಂದ ಸಂಜೆ 7ರವರೆಗೆ ಗ್ರಾಮೀಣ ಪ್ರದೇಶವಾದ ಕಲ್ಲೇಶ್ವರದ ಗೋಪಾಲಕೃಷ್ಣ ದೇವಾಲಯದಲ್ಲಿ ಅವರು ಕುಣಿಯುತ್ತಾರೆ. ಮಕ್ಕಳಿಗೂ ನಾಟ್ಯ ಕಲಿಸುತ್ತಾರೆ!
ಬುಧವಾರ ಯಲ್ಲಾಪುರ ವಿಶ್ವದರ್ಶನ ಕೇಂದ್ರೀಯ ವಿದ್ಯಾಲಯದ ಮಕ್ಕಳಿಗೆ ನೃತ್ಯದ ಪಾಠ ಮಾಡುವ ಅವರು ಶುಕ್ರವಾರ ಸಹ ವಿಶ್ವದರ್ಶನ ಕೇಂದ್ರಿಯ ವಿದ್ಯಾಲಯದ ಮಕ್ಕಳಿಗಾಗಿ ನೃತ್ಯ ತರಗತಿ ನಡೆಸುತ್ತಾರೆ. ಶನಿವಾರ ಮಧ್ಯಾಹ್ನ 2.30ರಿಂದ ಸಂಜೆ 7ಗಂಟೆಯವರೆಗೆ ವಿಶ್ವದರ್ಶನ ಆವಾರದಲ್ಲಿ ಚಿಣ್ಣರಿಗೆ ನಾಟ್ಯ ಮಾಡಿಸುತ್ತಾರೆ.
ವಿನುತಾ ಹೆಗಡೆ ಅವರು ತಮ್ಮ 10ನೇ ವಯಸ್ಸಿನಲ್ಲಿ ಭರತ ನಾಟ್ಯ ವೇದಿಕೆ ಪ್ರವೇಶಿಸಿದರು. ಕಳೆದ 24 ವರ್ಷಗಳಿಂದ ಅವರು ನಿತ್ಯ ಭರತ ನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಸಹನಾ ಹೆಗಡೆ ಅವರ ಗರಡಿಯಲ್ಲಿ ಪಳಗಿದ ಅವರು ಇದೀಗ ತಮ್ಮದೇ ಆದ ಶಿಷ್ಯರನ್ನು ಹೊಂದಿದ್ದಾರೆ. ವಿನುತಾ ಹೆಗಡೆ ಅವರ 6 ವರ್ಷದ ಪುತ್ರಿ ವಾರುಣಿ ಹೆಗಡೆ ಸಹ ನಾಟ್ಯಕಲೆಯಲ್ಲಿ ಹೆಜ್ಜೆ ಹಾಕಿದ್ದಾರೆ. ವಾರುಣಿ ಹೆಗಡೆ ತಮ್ಮ 3ನೇ ವಯಸ್ಸಿನಲ್ಲಿ ವೇದಿಕೆ ಪ್ರದರ್ಶನ ನೀಡಿದ್ದು, ಇದಕ್ಕೂ ವಿನುತಾ ಹೆಗಡೆ ಅವರೇ ಪ್ರೇರಣೆ!
ವಿನುತಾ ಹೆಗಡೆ ಅವರಿಗೆ ಬಾಲ್ಯದಿಂದಲೂ ಭರತ ನಾಟ್ಯದ ಬಗ್ಗೆ ಅಪಾರ ಆಸಕ್ತಿ. ಗ್ರಾಮೀಣ ಭಾಗದಲ್ಲಿ ಗೆಜ್ಜೆ ಕಟ್ಟಿ ಕುಣಿಯಲು ಶುರು ಮಾಡಿದ ಅವರು ನಾಟ್ಯ ಅಭ್ಯಾಸಕ್ಕಾಗಿ ಶಿರಸಿ-ಹುಬ್ಬಳ್ಳಿಗೂ ಒಡಾಟ ನಡೆಸಿದ್ದಾರೆ. ಭರತನಾಟ್ಯ ವಿಷಯವಾಗಿಯೇ ಮೈಸೂರಿನ ಅಲ್ಲಮ್ಮಪ್ರಭು ಲಲಿತ ಅಕಾಡೆಮಿಯಲ್ಲಿ ಸ್ನಾತಕೋತರ ಪದವಿ ಪೂರೈಸಿದ್ದಾರೆ. ಕಳೆದ 12 ವರ್ಷಗಳಿಂದ ನಾಟ್ಯಾಂಜಲಿ ಕಲಾ ಕೇಂದ್ರದ ನೃತ್ಯ ಗುರುವಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ನಾಡಿನ ಹಲವು ಪ್ರತಿಷ್ಠಿತ ಉತ್ಸವಗಳಲ್ಲಿ ವಿನುತಾ ಹೆಗಡೆ ಅವರು ನಾಟ್ಯ ಪ್ರದರ್ಶನ ನೀಡಿದ್ದಾರೆ. ಇದಕ್ಕಾಗಿ ಹಲವು ಪ್ರಶಸ್ತಿಗಳು ಸಹ ಅವರಿಗೆ ಸಿಕ್ಕಿದೆ.