ಹೊನ್ನಾವರ: ಹತ್ತು ವರ್ಷದ ಹಿಂದೆ ಪಾರ್ಶವಾಯುವಿಗೆ ಒಳಗಾಗಿದ್ದ 74ರ ವೃದ್ಧೆಯನ್ನು 2500ರೂ ಹಣದ ಆಸೆಗೆ ನೆರೆಮನೆಯಾತ ಕೊಲೆಗೆ ಪ್ರಯತ್ನಿಸಿದ್ದು, ಸಾಯುವ ಮುನ್ನ ವೈದ್ಯರಲ್ಲಿ ಈ ವಿಷಯ ಹೇಳಿ ಕಾಶಿ ತಾಂಡೇಲ್ ಸಾವನಪ್ಪಿದ್ದಾರೆ!
ಹೊನ್ನಾವರದ ಕಾಸರಕೋಡಿನ ಶಂಕರ್ ಮಾದೇವ ತಾಂಡೇಲ್ (42) ತಮ್ಮ ಪತ್ನಿ ಪತ್ನಿ ಅನುಸೂಯಾ ಹಾಗೂ ಆಕಾಶ, ರಚಿತಾ, ಗಣೇಶ ಜೊತೆ ವಾಸವಾಗಿದ್ದರು. ವೃದ್ಧ ತಾಯಿ ಕಾಶಿ ಮಾದೇವ ತಾಂಡೇಲ್ ಅವರನ್ನು ಸಹ ಈ ಕುಟುಂಬದವರು ಆರೈಕೆ ಮಾಡುತ್ತಿದ್ದರು. ಶಂಕರ್ ತಾಂಡೇಲ್ ಮೀನುಗಾರಿಕೆ ವೃತ್ತಿಯವರಾಗಿದ್ದು, ಅವರ ಪತ್ನಿ ಅನುಸೂಯಾ ಮೀನು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದರು. ಮೀನುಗಾರಿಕೆಗೆ ತೆರಳಿದ ಶಂಕರ್ ತಾಂಡೇಲ್ 3-4 ದಿನ ಬಿಟ್ಟು ಮನೆಗೆ ಮರಳುವುದು ಸಾಮಾನ್ಯವಾಗಿತ್ತು.
ನ 2ರಂದು ಮೀನುಗಾರಿಕೆಗೆ ತೆರಳಿದ್ದ ಶಂಕರ್ ತಾಂಡೇಲ್ ನ 6ರಂದು ಮನೆಗೆ ಬಂದಾಗ ಅವರ ತಾಯಿ ಕಾಶಿ ತಾಂಡೇಲ್ ಪೆಟ್ಟು ಮಾಡಿಕೊಂಡಿದ್ದರು. ಈ ಬಗ್ಗೆ ವಿಚಾರಿಸಿದಾಗ `ಪಕ್ಕದಮನೆಯ ತುಕಾರಾಮ ತಾಂಡೇಲ್ ತನ್ನ ಕೊಲೆಗೆ ಪ್ರಯತ್ನಿಸಿದ’ ಎಂಬ ಮಾಹಿತಿ ನೀಡಿದ್ದರು. `ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಸ್ಟೂಲಿನಿಂದ ಹೊಡೆದಿದ್ದರಿಂದ ಗಾಯವಾಗಿದೆ. ತನ್ನ ಬಳಿಯಿದ್ದ 2500ರೂ ಹಣ ಸಹ ಕಾಣೆಯಾಗಿದೆ’ ಎಂದು ಕಾಶಿ ತಾಂಡೇಲ್ ಮಗನಲ್ಲಿ ಹೇಳಿದ್ದರು. ಆದರೆ, ತುಕಾರಾಮ ತಾಂಡೇಲ್ ಬಳಿ ವಿಚಾರಿಸಿದಾಗ ಆತ `ನಾನು ಹಾಗೇ ಮಾಡಿಲ್ಲ’ ಎಂದು ಹೇಳಿದ್ದ. ಪತ್ನಿಯ ಬಳಿ ವಿಚಾರಿಸಿದಾಗ `ತಾನು ಮೀನು ಮಾರಾಟಕ್ಕೆ ಹೋಗಿದ್ದೆ’ ಎಂದಿದ್ದರು. ಮಗಳನ್ನು ಕೇಳಿದಾಗ `ತಾನು ಟಿವಿ ನೋಡುತ್ತಿದ್ದೆ’ ಎಂದಿದ್ದರು. ತುಕಾರಾಮ ತಾಂಡೇಲ್ ಈ ಕೃತ್ಯ ಎಸಗಿದ ಬಗ್ಗೆ ಸಾಕ್ಷಿ ಇಲ್ಲದ ಕಾರಣ ಶಂಕರ್ ತಾಂಡೇಲ್ ಸಹ ಸುಮ್ಮನಾಗಿದ್ದರು.
ಗಾಯಗೊಂಡ ತಾಯಿಯನ್ನು ಶಂಕರ್ ತಾಂಡೇಲ್ ಅವರ ಪತ್ನಿ ಉಡುಪಿ ಕ್ಲಿನಿಕ್’ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಗುಣಮುಖವಾಗದ ಹಿನ್ನಲೆ ಶಂಕರ್ ತಾಂಡೇಲ್ ಅವರನ್ನು ಸ್ನೇಹಕುಂಜ ಆಸ್ಪತ್ರೆ, ಅದಾದ ಮೇಲೆ ಕಾಸರಕೋಡಿನಲ್ಲಿ ಚಿಕಿತ್ಸೆ ಕೊಡಿಸಿದರು. ನ 8ರಂದು ಶ್ರೀದೇವಿ ಆಸ್ಪತ್ರೆಗೆ ಕರೆತಂದು `ತಾಯಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ’ ಎಂದು ಸುಳ್ಳು ಹೇಳಿ ಚಿಕಿತ್ಸೆ ಕೊಡಿಸಿದ್ದರು. ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರ ಬಳಿ ಕಾಶಿ ತಾಂಡೇಲ್ `ನಾನು ಶೌಚಕ್ಕೆ ಹೋದಾಗ ಪಕ್ಕದಮನೆಯ ತೂಕಾರಾಮ ತಾಂಡೇಲ್ ಕುತ್ತಿಗೆಗೆ ಟವಲ್ ಹಾಕಿ ಕೊಲೆಗೆ ಪ್ರಯತ್ನಿಸಿದ. ಸ್ಟೂಲ್’ನಿಂದ ಹಲ್ಲೆ ಮಾಡಿದ. ಹೀಗಾಗಿ ಪೆಟ್ಟಾಗಿದೆ’ ಎಂದು ವಿವರಿಸಿದ್ದರು.
ನ 10ರಂದು ನೋವು ತಾಳಲಾರದೇ ಕಾಶಿ ತಾಂಡೇಲ್ ಸಾವನಪ್ಪಿದ್ದು, ವೈದ್ಯರ ಬಳಿ ತಾಯಿ ನೀಡಿದ ಹೇಳಿಕೆ ಆಧರಿಸಿ ಶಂಕರ್ ತಾಂಡೇಲ್ ಪೊಲೀಸ್ ದೂರು ನೀಡಿದ್ದಾರೆ. `ತಾಯಿ ಸಾವಿನ ಬಗ್ಗೆ ತಮಗೆ ಅನುಮಾನವಿದೆ’ ಎಂದು ಶಂಕರ್ ತಾಂಡೇಲ್ ಹೇಳಿದ್ದಾರೆ.



