ಕುಮಟಾ ಹಾಗೂ ಯಲ್ಲಾಪುರದಲ್ಲಿನ ಸರ್ಕಾರಿ ನೌಕರರ ಚುನಾವಣೆ ಅಧ್ಯಕ್ಷ ಹಾಗೂ ಇನ್ನಿತರ ಹುದ್ದೆ ಆಕಾಂಕ್ಷಿಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಯಲ್ಲಾಪುರದಲ್ಲಿ ಅಧ್ಯಕ್ಷ ಆಕಾಂಕ್ಷಿಯೊಬ್ಬರು ರೆಸಾರ್ಟ ರಾಜಕೀಯದ ಬಗ್ಗೆ ಮಾತನಾಡಿದ್ದು, ಕುಮಟಾದಲ್ಲಿ ಕಾಂಚಾಣದ ಸದ್ದು ಕೇಳಿ ಬರುತ್ತಿದೆ.
ಕುಮಟಾದಲ್ಲಿ ಅಭ್ಯರ್ಥಿ ಆಕಾಂಕ್ಷಿಯೊಬ್ಬರು 50 ಸಾವಿರ ರೂಪಾಯಿಗೆ ವ್ಯಾಪಾರವಾದ ಬಗ್ಗೆ ಊಹಾಪೋಹಗಳು ದಟ್ಟವಾಗಿದೆ. ಹಣ ಪಡೆದ ನಂತರ ಅವರು ತಮ್ಮ ಉಮೇದುದಾರಿಕೆ ಹಿಂಪಡೆದಿರುವುದು ನೌಕರರ ವಲಯದಲ್ಲಿ ದೊಡ್ಡ ಪ್ರಮಾಣದ ಚರ್ಚೆಗೆ ಕಾರಣವಾಗಿದೆ. ಇದರೊಂದಿಗೆ ಇನ್ನೂ ಇಬ್ಬರು ತಮ್ಮ ಉಮೇದುದಾರಿಕೆ ಹಿಂಪಡೆಯಲು ನಿರ್ಧರಿಸಿದ್ದು, ಅವರ ಅರ್ಹತೆಗೆ ತಕ್ಕ ಕಾಸು ಓಡಾಡಿಲ್ಲ. ಹೀಗಾಗಿ ಹಿಂಪಡೆಯುವಿಕೆ ಈವರೆಗೂ ಅಂತಿಮವಾಗಿಲ್ಲ.
ಇನ್ನೂ ಯಲ್ಲಾಪುರದಲ್ಲಿ ಅಧ್ಯಕ್ಷ ಅಭ್ಯರ್ಥಿಯೊಬ್ಬರು ಮತದಾರರನ್ನು ರೆಸಾರ್ಟ’ಗೆ ಕರೆದೊಯ್ಯುವ ಆಮೀಷ ಒಡ್ಡಿರುವುದು ಭಾರೀ ಪ್ರಮಾಣದಲ್ಲಿ ಟೀಕೆಗೆ ಗುರಿಯಾಗಿದೆ. ಸರ್ಕಾರಿ ನೌಕರನಾಗಿ ಮತದಾರರಿಗೆ ಆಮೀಷ ಒಡ್ಡುತ್ತಿರುವ ವಿಷಯ ಶಾಸಕರ ಕಚೇರಿಯಲ್ಲಿ ಸಹ ಪಿಸುಗುಟ್ಟಿದೆ. `ಅಧ್ಯಕ್ಷ ಸ್ಥಾನಕ್ಕಾಗಿ ತಾನೂ ಎಷ್ಟು ಬೇಕಾದರೂ ಖರ್ಚು ಮಾಡುವೆ’ ಎಂದು ಅಧ್ಯಕ್ಷ ಆಕಾಂಕ್ಷಿ ಹೇಳಿಕೊಂಡಿರುವ ಬಗ್ಗೆ ನೌಕರರ ಸಂಘದ ಮತದಾರರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.