ಅಂಕೋಲಾ: ಅವರ್ಸಾದ ಗೂಡ್ಸ ರಿಕ್ಷಾ ಚಾಲಕರ ನಡುವೆ ಪಾಳಿ ಹಚ್ಚುವ ವಿಷಯದಲ್ಲಿ ವಾಗ್ವಾದ ನಡೆದಿದ್ದು, ಅದು ಹೊಡೆದಾಟದ ಸ್ವರೂಪ ಪಡೆದಿದೆ.
ಸಕಲಬೇಣದ ಸಂದೀಪ ಉಮೇಶ ತಳ್ಳೇಕರ್ ಅವರ ಮೇಲೆ ಕಾತ್ಯಾಯನಿ ದೇವಾಲಯ ಬಳಿಯ ಲಕ್ಷ್ಮಣ ಬೊಮ್ಮಯ್ಯ ನಾಯಕ ರಾಡಿನಿಂದ ಹೊಡೆದಿದ್ದಾರೆ. ಆಗ ಅಲ್ಲಿದ್ದ ಹನುಮಂತ ನಾಯ್ಕ ಹಾಗೂ ಜಯಂತ ನಾಯ್ಕ ಸೇರಿ ಈ ಹೊಡೆದಾಟ ಬಿಡಿಸಿದ್ದಾರೆ.
ಸಂದೀಪ ತಳ್ಳೇಕರ್ ಗೂಡ್ಸ ರಿಕ್ಷಾ ಚಾಲಕರು. ಅವರ್ಸಾದ ಟಿ ಎಸ್ ಕಾಮತ್ ಅವರ ಮನೆ ಬಳಿ ನಿಲ್ದಾಣದಲ್ಲಿ ಅವರು ಪಾಳಿ ಪ್ರಕಾರ ರಿಕ್ಷಾ ನಿಲ್ಲಿಸುತ್ತಿದ್ದರು. ಬಾಡಿಗೆಗೆ ಬರುವವರ ಬಳಿ ವ್ಯವಹಾರ ಕುದುರಿಸಿ ಬಾಡಿಗೆಗೆ ಹೋಗುತ್ತಿದ್ದರು. ಕಾತ್ಯಾಯನಿ ದೇವಾಲಯ ಬಳಿಯ ಲಕ್ಷö್ಮಣ ಬೊಮ್ಮಯ್ಯ ನಾಯಕ ಸಹ ಅಲ್ಲಿಯೇ ಪಾಳಿ ಪ್ರಕಾರ ರಿಕ್ಷಾ ಹಚ್ಚುತ್ತಿದ್ದರು. ಆದರೆ, ಮದ್ಯದ ನಶೆಯಲ್ಲಿರುತ್ತಿದ್ದ ಅವರು ಗ್ರಾಹಕರು ಬಂದಾಗ ಅವರ ಬಳಿ ಸರಿಯಾಗಿ ವ್ಯವಹರಿಸುತ್ತಿರಲಿಲ್ಲ.
ಸೋಮವಾರ ಬೆಳಗ್ಗೆ ಪಾಳಿಯಲ್ಲಿದ್ದ ಸಂದೀಪ ತಳ್ಳೇಕರ್ ಅವರಿಗೆ ಬಾಡಿಗೆಯೊಂದು ಬಂದಿದ್ದು, ಅಲ್ಲಿದ್ದ ಉಲ್ಲಾಸ ಗಾಂವಗಾರ್ ಆ ಬಾಡಿಗೆಯನ್ನು ಲಕ್ಷ್ಮಣನಿಗೆ ಕೊಡಿಸಿದ್ದರು. ಆಗ ಪಾಳಿ ತಪ್ಪಿಸಿ ಬಾಡಿಗೆ ಹಿಡಿದ ಬಗ್ಗೆ ಸಂದೀಪ ತಕರಾರು ಮಾಡಿದ್ದರು. ಇದೇ ಕಾರಣಕ್ಕೆ ಲಕ್ಷö್ಮಣ ಸಿಟ್ಟಾಗಿದ್ದರು.
ಮಧ್ಯಾಹ್ನ 4 ಗಂಟೆಗೆ ರಿಕ್ಷಾ ಸ್ಟಾಂಡಿಗೆ ಬಂದ ಲಕ್ಷ್ಮಣ ಪಾಳಿ ಹಚ್ಚಿರಲಿಲ್ಲ. ಆಗ, ಅಲ್ಲಿಗೆ ಬಂದ ಪಾಪು ಗಣೇಶ ಪಾಳಿ ಹಚ್ಚಿದ್ದು, ತನ್ನ ಪಾಳಿ ಜಾಗದಲ್ಲಿ ಪಾಪು ಬಂದಿದ್ದನ್ನು ಲಕ್ಷö್ಮಣ ವಿರೋಧಿಸಿದ್ದರು. `ಬೆಳಗ್ಗೆ ಸಂದೀಪ ಸಹ ಹೀಗೆ ಮಾಡಿದ’ ಎಂದು ಸಿಟ್ಟಿನಲ್ಲಿ ಬಂದ ಲಕ್ಷö್ಮಣ ಗಾಡಿಯಲ್ಲಿದ್ದ ರಾಡ ತೆಗೆದು ಸಂದೀಪರ ತಲೆ ಮೇಲೆ ಕುಟ್ಟಿದರು. ಆಗ ಅಲ್ಲಿದ್ದ ಹನುಮಂತ ನಾಯ್ಕ, ಜಯಂತ ನಾಯ್ಕ ಇತರರು ಸೇರಿ ಬಿಡಿಸಿದರು.
ಗಾಯಗೊಂಡ ಸಂದೀಪ ಮನೆಗೆ ಫೋನ್ ಮಾಡಿ ಕುಟುಂಬದವರ ಜೊತೆ ಆಸ್ಪತ್ರೆಗೆ ತೆರಳಿದ್ದಾರೆ. ಜೊತೆಗೆ ಲಕ್ಷ್ಮಣ ನಾಯಕರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಇನ್ನೂ ಸಂದೀಪ ಸಹ ಲಕ್ಷ್ಮಣ ನಾಯಕ’ಗೆ ಹೊಡೆದು ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.