ಅಂಕೋಲಾ: ನಿನ್ನೆ ಮೊನ್ನೆಯವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದೆ. ಆದರೆ, ಅಂಕೋಲಾ ತಾಲೂಕಿನ ನೆವಳಸೆಯಲ್ಲಿನ ತೊರೆಗೆ ಈಗ ನೀರಿಲ್ಲ!
ಅಂಕೋಲಾ ತಾಲೂಕಿನಲ್ಲಿ ಈ ಬಾರಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿರುವುದಕ್ಕೆ ಶಿರೂರು ಗುಡ್ಡ ಕುಸಿತವೇ ಸಾಕ್ಷಿ. ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ಆದ ಅವಾಂತರಗಳು ಒಂದೆರಡಲ್ಲ. ಆದರೆ, ಗಂಗಾವಳಿ ನದಿ ಸೇರುವ ನವಳೆಸೆ ಕಾಡಿನ ತೊರೆಯಲ್ಲಿ ಇದೀಗ ಕೊಂಚವೂ ನೀರಿಲ್ಲ.
ಪ್ರತಿ ವರ್ಷ ಏಪ್ರಿಲ್ ಅಂತ್ಯದವರೆಗೂ ಈ ತೊರೆಯಲ್ಲಿ ನೀರು ಹರಿಯುತ್ತಿತ್ತು. ನವೆಂಬರ್ ಮಾಸದಲ್ಲಂತೂ ಈ ಹಳ್ಳವನ್ನು ದಾಡಲು ಸಾಧ್ಯವಾಗುತ್ತಿರಲಿಲ್ಲ. ಆ ಪ್ರಮಾಣದಲ್ಲಿ ರಭಸ ನೀರು ಕಾಣಿಸುತ್ತಿತ್ತು. ಈ ವರ್ಷ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿದರೂ ಈ ಹಳ್ಳದಲ್ಲಿ ಕಿಂಚಿತ್ತು ನೀರು ಇಲ್ಲ. ಮಣ್ಣಿನ ಅಡಿಭಾಗದಲ್ಲಿ ಸಹ ತೇವಾಂಶ ಕಾಣಿಸುತ್ತಿಲ್ಲ. ಫೆಬ್ರವರಿ ಅಂತ್ಯದವರೆಗೂ ಇಲ್ಲಿನವರು ಈ ಹೊಳೆಯಲ್ಲಿ ಜೋರಾಗಿ ನೀರು ಹರಿಯುತ್ತಿರುವುದನ್ನು ನೋಡಿದ್ದರು. ಆದರೆ, ಮಳೆ ಮುಗಿದ ಕೆಲವೇ ದಿನಗಳಲ್ಲಿ ನೀರು ಮಾಯವಾಗಿರುವುದಕ್ಕೆ ಆ ಭಾಗದವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನೆವಳಸೆ ಘಟ್ಟದಲ್ಲಿ ಹರಿಯುವ ತೊರೆ ಮುಂದೆ ಗಂಗಾವಳಿ ನದಿ ಸೇರುತ್ತದೆ. ತೊರೆಯ ನೀರು ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂಗಿದ ನಂತರ ಕಲ್ಪಂಡೆಗಳನ್ನು ಸುತ್ತುವರೆದು ನದಿಗೆ ಹೋಗುತ್ತದೆ. ಆದರೆ, ಈ ಬಾರಿ ತೊರೆಯ ಅಕ್ಕಪಕ್ಕದಲ್ಲಿಯೂ ನೀರು ಇಂಗಿದ ಕುರುಹುಗಳಿಲ್ಲ. ಮಳೆಯಿಂದ ಬಿದ್ದ ನೀರೆಲ್ಲವೂ ನೇರವಾಗಿ ನದಿ ಪಾಲಾಗಿರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ನೆವಳಸೆಯಲ್ಲಿಯೂ ಇದೀಗ ಬೇಸಿಗೆಯ ಅನುಭವವಾಗುತ್ತಿದೆ. ತೊರೆಯ ಉದ್ದಕ್ಕೂ ಒಣಗಿದ ಕಲ್ಬಂಡೆಗಳನ್ನು ಬಿಟ್ಟು ಕಿಂಚಿತ್ತು ನೀರು ಸಿಗುತ್ತಿಲ್ಲ.
`ಈ ಬಾರಿ ಗುಡ್ಡ ಕುಸಿತ ಆಗುವ ಪ್ರಮಾಣದಲ್ಲಿ ಮಳೆ ಆಗಿದ್ದರೂ ಪೃಕೃತಿ ಈಗಲೇ ಬರಗಾಲದ ಮುನ್ಸುಚನೆ ನೀಡಿದೆ’ ಎಂದು ಪರಿಸರ ತಜ್ಞ ದಿನೇಶ ಹೊಳ್ಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೆವಳಸೆ ಕಾಡಿನಿಂದ ದಿನೇಶ ಹೊಳ್ಳ ಅವರು ನೀಡಿದ ಪ್ರತ್ಯಕ್ಷ ವರದಿಯ ವಿಡಿಯೋ ಇಲ್ಲಿ ನೋಡಿ..