ಕುಮಟಾ: ಕೊಂಕಣ ರೈಲಿನಲ್ಲಿ ಈಚೆಗೆ ಕಳ್ಳರ ಕಾಟ ಹೆಚ್ಚಾಗಿದೆ. ವಿವಿಧ ವಸ್ತುಗಳು ಕಳ್ಳತನವಾದ ಬಗ್ಗೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ಈ ಬಗೆಯ ಮೂರು ದೂರುಗಳು ಇದೀಗ ಜಿಲ್ಲಾ ಪೊಲೀಸರಿಗೆ ವರ್ಗವಾಗಿದೆ.
ಮುಂಬೈನ ಮಹ್ಮದ್ ಖಾನ್, ಕೇರಳದ ಸ್ರೀವಸ್ ಹಾಗೂ ಟಿ ಗೀತಾಕುಮಾರಿ ತಮ್ಮ ವಸ್ತುಗಳು ಕಳ್ಳರ ಪಾಲಾದ ಬಗ್ಗೆ ದೂರಿದ್ದಾರೆ. ಮಹ್ಮದ್ ಖಾನ್ ಜನವರಿ 7ರಂದು ಮಂಗಲದ್ವೀಪ ಎಕ್ಸಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದರು. ಕುಮಟಾ ರೈಲು ನಿಲ್ದಾಣದ ಬಳಿ ಅವರ ಪರ್ಸ ಜೊತೆ ಎಟಿಎಂ ಕಾರ್ಡುಗಳನ್ನು ಕಳ್ಳರು ಅಪಹರಿಸಿದ್ದಾರೆ. ಸ್ರೀವಸ್ ಎಸ್ ಅವರು ಮಾರ್ಚ 12ರಂದು ನೇತ್ರಾವತಿ ಎಕ್ಸಪ್ರೆಸ್’ನಲ್ಲಿ ಸಂಚರಿಸುತ್ತಿದ್ದಾಗ ಕಳ್ಳರು ಅವರ ಮೊಬೈಲ್ ಕದ್ದಿದ್ದಾರೆ. 35 ಸಾವಿರ ರೂ ಬೆಲೆಯ ಸ್ಯಾಮ್‌ಸಂಗ್ ಮೊಬೈಲ್ ಕಳ್ಳತನವಾದ ಬಗ್ಗೆ ಅವರು ದೂರಿದ್ದಾರೆ.
ಇನ್ನೂ ಕೇರಳದ ಟಿ ಗೀತಾಕುಮಾರಿ ಅವರು ಸಹ ಮೇ 11ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬಳಿಯಿದ್ದ 10 ಸಾವಿರ ರೂ ಹಣ, ಒಪ್ಪೊ ಕಂಪನಿಯ ಮೊಬೈಲ್, ವಾಚ್ ಸೇರಿ 27 ಸಾವಿರ ರೂ ಮೌಲ್ಯದ ಸ್ವತ್ತುಗಳನ್ನು ಕದ್ದಿದ್ದಾರೆ. ಈ ಬಗ್ಗೆ ಎಲ್ಲರೂ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದು, ಆ ದೂರುಗಳು ಜಿಲ್ಲಾ ಪೊಲೀಸ್ ಘಟಕಕ್ಕೆ ವರ್ಗಾವಣೆಯಾಗಿದೆ. ಎಲ್ಲಾ ಪ್ರಕರಣಗಳು ಕುಮಟಾದಲ್ಲಿಯೇ ನಡೆದಿದ್ದರಿಂದ ಅಲ್ಲಿಂದಲೆ ತನಿಖೆ ಶುರುವಾಗಲಿದೆ.