ಕುಮಟಾ: ಮಣಿಕಿ ಮೈದಾನ ಅಂಚಿನ ಹಿಂದು ರುದ್ರಭೂಮಿ ಅಭಿವೃದ್ಧಿಯ ಕನಸು ದಶಕ ಕಳೆದರೂ ಈಡೇರಿಲ್ಲ. ಸ್ಮಶಾನದಲ್ಲಿ ಎಲ್ಲೆಂದರಲ್ಲಿ ಸುಟ್ಟ ಮೂಳೆಗಳ ರಾಶಿ ಬಿದ್ದಿದ್ದು, ಇಲ್ಲಿನ ಸ್ವಚ್ಛತೆ ಬಗ್ಗೆ ಯಾರಿಗೂ ಕಾಳಜಿ ಇಲ್ಲ!
ಹಿಂದುತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರುವ ಯುಗಾದಿ ಉತ್ಸವ ಸಮಿತಿಯವರು ಈ ರುದ್ರಭೂಮಿ ನಿರ್ವಹಣೆಗೆ ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆದಿದ್ದಾರೆ. ಆದರೆ, ಅವರಿಗೆ ಅವಕಾಶ ಸಿಕ್ಕಿಲ್ಲ. ಪುರಸಭೆ ಅಧೀನದಲ್ಲಿರುವ ರುದ್ರಭೂಮಿಯ ಸ್ವಚ್ಚತೆ ಕಾಪಾಡಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಇದರ ಪರಿಣಾಮ ರುದ್ರಭೂಮಿಯ ಎಲ್ಲಡೆ ಅಶುಚಿತ್ವ ಎದ್ದು ತೋರುತ್ತಿದೆ. ಮೂಲಭೂತ ಸೌಕರ್ಯಗಳಿಗೂ ಇಲ್ಲಿ ಹುಡುಕಾಟ ನಡೆಸಬೇಕಿದೆ.
ಶವ ಸುಡಲು ಇರುವ ಶೆಡ್ ಬೇಸಿಗೆಯಲ್ಲಿ ಕುದಿಯುತ್ತದೆ. ಮಳೆಗಾಲದಲ್ಲಿ ಸೋರುತ್ತದೆ. ಶತಮಾನಗಳಷ್ಟು ಹಳೆಯದಾದ ರುದ್ರಭೂಮಿಯ ಸ್ವಚ್ಚತೆಗೆ ರೋಟರಿ ಸೇರಿ ವಿವಿಧ ಸಂಘ-ಸoಸ್ಥೆಗಳು ಪ್ರಯತ್ನಿಸುತ್ತಿವೆ. ಆದರೆ, ಸರ್ಕಾರಕ್ಕೆ ಅದರ ಅಭಿವೃದ್ಧಿಗೆ ಮನಸಿಲ್ಲ. ನಿರ್ವಹಣೆ ನೋಡಿಕೊಳ್ಳಬೇಕಿದ್ದ ಪುರಸಭೆ ನಿದ್ರೆಗೆ ಜಾರಿದೆ.
ಪಾಳುಬಿದ್ದ ಬಾವಿ ಹಾಗೂ ಚಿಕ್ಕ ಕೋಣೆಹೊರತುಪಡಿಸಿ ಸ್ಮಶಾನದಲ್ಲಿ ಬೇರೇನೂ ಇಲ್ಲ. ಗೋಡೆಗೆ ತಾಗಿರುವ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲ. ರುದ್ರಭೂಮಿ ಪಕ್ಕದಲ್ಲಿ ಕರಾವಳಿ ಕವಾಲು ಪಡೆ ಕಚೇರಿಯಿದ್ದು, ಹೆಣ ಸುಡಲು ಬಂದವರು ತುರ್ತು ಸಹಾಯ ಬೇಕಾದರೆ ಅಲ್ಲಿ ಓಡುತ್ತಾರೆ.
ಇನ್ನೂ ರುದ್ರಭೂಮಿಯೊಳಗಿರುವ ಶೆಡ್’ನ ದಿಕ್ಕು ಸರಿಯಾಗಿಲ್ಲ ಎನ್ನುವುದು ಹಲವರ ವಾದ. ಈ ಕಾರಣಕ್ಕಾಗಿ ಶೆಡ್ ಒಳಗೆ ಹೆಣ ಸುಡುವವರಿಗಿಂತ ಹೊರಭಾಗದಲ್ಲಿ ಅಂತ್ಯಕ್ರಿಯೆ ನಡೆಸುವವರೇ ಹೆಚ್ಚು. ಹೀಗಾಗಿ ಎಲ್ಲೆಂದರಲ್ಲಿ ಅರೆಬರೆ ಸುಟ್ಟ ಮೂಳೆಗಳ ರಾಶಿ ಕಾಣುತ್ತದೆ. ಅವಕಾಶ ಕೊಟ್ಟರೆ ಶೆಡ್ ದುರಸ್ಥಿ ಜೊತೆ ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವುದಾಗಿ ಅನೇಕ ಸಂಘ ಸಂಸ್ಥೆಗಳು ಹೇಳಿಕೊಂಡಿವೆ. ಆದರೆ, ಅವರಿಗೆ ಅವಕಾಶವೇ ಸಿಗುತ್ತಿಲ್ಲ.