ಯಲ್ಲಾಪುರ: ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಯಲ್ಲಾಪುರದಲ್ಲಿ ತೋಟಿಗರು ಬುಧವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸಿದರು.
`ಅಡಿಕೆ ಬೆಳೆಗಾರರ ಸೊಪ್ಪಿನ ಬೆಟ್ಟದ ಹಕ್ಕಿಗೆ ಈಚೆಗೆ ತೊಂದರೆಯಾಗುತ್ತಿದೆ. ಕಂದಾಯ ಹಾಗೂ ಅರಣ್ಯಾಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಅನೇಕರು ದೂರಿದರು. `ರೈತರ ಸಮಸ್ಯೆ ಬಗ್ಗೆ ಸೆಪ್ಟೆಂಬರ್’ನಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಸಮಸ್ಯೆ ಆಲಿಸಿಲ್ಲ. ಆ ವೇಳೆ ನೀಡಿದ ಭರವಸೆಗಳು ಈಡೇರಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವನ್ಯಜೀವಿಗಳ ಆಕ್ರಮಣ, ಬೆಳೆವಿಮೆ ಪರಿಹಾರದಲ್ಲಿನ ಅನ್ಯಾಯ, ಸೊಪ್ಪಿನ ಬೆಟ್ಟದಲ್ಲಿ ಸೊಪ್ಪು ಕಟಾವು, ಮಣ್ಣು ತೆಗೆಯುವಿಕೆಗೆ ತಡೆ, ಸೊಪ್ಪಿನ ಬೆಟ್ಟ ಪ್ರದೇಶದಲ್ಲಿನ ಮನೆ ನಿರ್ಮಾಣಕ್ಕೆ ತೊಂದರೆ ಕುರಿತು ವಿವರಿಸಿದರು. ರೈತರ ಪರವಾಗಿ ದಾಖಲೆಗಳಿದ್ದರೂ ಅನಗತ್ಯ ಅಲೆದಾಟದ ಜೊತೆ ರೈತರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
`ಸೊಪ್ಪಿನಬೆಟ್ಟವನ್ನು ಒಳಗೊಂಡು ಮಾಲ್ಕಿ ಭೂಮಿಗೆ ಅಗಳ ಹಾಗೂ ಬೇಲಿ ನಿರ್ಮಾಣಕ್ಕೆ ಅವಕಾಶ ಕೊಡಬೇಕು. ನಿಯಮಾನುಸಾರ ಜಿಲ್ಲಾಡಳಿತದ ಅನುಮತಿ ಪಡೆದು ಸೊಪ್ಪಿನ ಬೆಟ್ಟದಲ್ಲಿ ಮನೆ ನಿರ್ಮಾಣ, ವಾಣಿಜ್ಯ ಬೆಳೆ ವಿಸ್ತರಣೆ ಮಾನ್ಯತೆ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ಕಾನೂನು ಅರಿವು ಇರುವ ಸಿಬ್ಬಂದಿ ನೇಮಕಾತಿ ನಡೆಯಬೇಕು. ಪಹಣಿ ಪತ್ರಿಕೆಯಲ್ಲಿನ ತಿದ್ದುಪಡಿಗಳನ್ನು ಸರಿಪಡಿಸಬೇಕು. ವನ್ಯಜೀವಿ ಹಾವಳಿಗೆ ತಕ್ಕ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.
ಅರಣ್ಯ ಅತಿಕ್ರಮಣದಾರರ ಅರ್ಜಿಗಳನ್ನು ಮಾನ್ಯ ಮಾಡಬೇಕು. ವನ್ಯಜೀವಿಗಳ ದಾಳಿಯಿಂದ ಜಾನುವಾರು ಸಾವನಪ್ಪಿದಾಗ ಹೆಚ್ಚಿನ ಪರಿಹಾರ ನೀಡಬೇಕು. ವಸತಿ ಪ್ರದೇಶಗಳಿಗೆ ಕಾಡುಪ್ರಾಣಿ ಬಾರದಂತೆ ತಡೆಯಬೇಕು’ ಎಂಬುದನ್ನು ಸೇರಿಸಿ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದರು. ಹೆದ್ದಾರಿ ತಡೆ ನಡೆಸಿದ ಕಾರಣ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು.
ಅಡಿಕೆ ಬೆಳೆಗಾರರ ಹೋರಾಟ ಹೇಗಿತ್ತು? ವಿಡಿಯೋ ಇಲ್ಲಿ ನೋಡಿ..