ಯಲ್ಲಾಪುರ: ಸ್ಥಳೀಯವಾಗಿ ಪ್ರಸಾರವಿಲ್ಲದ ಹಾಗೂ ಮುದ್ರಣವೇ ಕಾಣದ ಕೆಲ ಪತ್ರಿಕೆಗಳನ್ನು ಸರ್ಕಾರಿ ಕಚೇರಿಗೆ ಪೂರೈಸಿರುವುದಾಗಿ ದಾಖಲೆ ಸೃಷ್ಠಿಸಿ ಪತ್ರಿಕಾ ವಿತರಕರೊಬ್ಬರು ಸರ್ಕಾರಿ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ದಾಖಲೆಗಳಿಂದ ಈ ಹಗರಣ ಹೊರಬಿದ್ದಿದೆ.
ದಾಖಲೆಗಳ ಪ್ರಕಾರ, ಮುದ್ರಣ ಕಾಣದ ಅನೇಕ ಪತ್ರಿಕೆಗಳು ಯಲ್ಲಾಪುರದ ಸರ್ಕಾರಿ ಕಚೇರಿಗಳಿಗೆ ಮಾರಾಟವಾಗುತ್ತಿದೆ. ಕಾಳಮ್ಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರು ಸಹ ದಾಖಲೆಗಳ ಪ್ರಕಾರ ಇಂಥ ಪತ್ರಿಕೆಗಳನ್ನು ಕಾಸು ಕೊಟ್ಟು ಖರೀದಿಸಿದ್ದಾರೆ. ಮಾರುಕಟ್ಟೆಗೆ ಬಾರದ ಸಂಜೆ ಪತ್ರಿಕೆಗಳು ಸಹ ಬೆಳಗ್ಗೆ ಅವಧಿಯ ಕಾಲೇಜಿಗೆ ಪೂರೈಕೆಯಾಗಿದೆ. ಮುದ್ರಣ ಸ್ಥಗಿತವಾದ ಪತ್ರಿಕೆಗಳ ಹೆಸರಿನಲ್ಲಿಯೂ ಎಜೆಂಟರ ಖಾತೆಗೆ ಹಣ ಸಂದಾಯವಾಗಿದೆ. ಮುದ್ರಣ ರೂಪದಲ್ಲಿರುವ ಪತ್ರಿಕೆಗಳನ್ನು ಸಹ ಮುಖ ಬೆಲೆಗಿಂತಲೂ ಅಧಿಕ ಬೆಲೆ ನೀಡಿ ಇಲ್ಲಿನವರು ಓದುತ್ತಾರೆ. ದೊರೆತ ಐದು ವರ್ಷದ ದಾಖಲೆಗಳನ್ನು ಪರಿಶೀಲಿಸಿದಾಗ ಪ್ರತಿ ಬಾರಿಯೂ ಅಗತ್ಯಕ್ಕಿಂತ ಅಧಿಕ ಸರ್ಕಾರಿ ಹಣ ಅನಗತ್ಯವಾಗಿ ಅನ್ಯರ ಪಾಲಾಗಿದೆ. ಪತ್ರಿಕಾ ವಿತರಕರು ನೀಡಿದ ಬಿಲ್’ಗೆ ಈ ಹಿಂದೆ ಆಡಳಿತ ನಡೆಸಿದ ಕೆಲ ಪ್ರಾಚಾರ್ಯರು ಕಣ್ಮುಚ್ಚಿಕೊಂಡು ಸಹಿ ಮಾಡಿದ್ದು, ಸರ್ಕಾರಿ ಹಣ ದುರುಪಯೋಗವಾದ ಬಗ್ಗೆ ಅರಿವಿದ್ದರೂ ಆಡಳಿತ ಮಂಡಳಿಯವರು ಮೌನವಾಗಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಅನೇಕ ಸ್ಥಳೀಯ ಪತ್ರಿಕೆಗಳು ಉಚಿತವಾಗಿ ಲಭ್ಯವಿದೆ. ನಿತ್ಯ ಪಿಡಿಎಫ್ ಮೂಲಕವೂ ಅಂಥ ಪತ್ರಿಕೆಗಳ ಪ್ರಸಾರ ನಡೆದಿದೆ. ಉಚಿತವಾಗಿ ದೊರೆಯುವ ಪತ್ರಿಕೆಗಳನ್ನು ಸಹ ಅವುಗಳ ಮುಖಬೆಲೆಗಿಂತಲೂ ಹೆಚ್ಚಿನ ಹಣಕ್ಕೆ ಸರ್ಕಾರಿ ಕಚೇರಿಗೆ ಮಾರಾಟ ಮಾಡಲಾಗಿದೆ. 2 ರೂಪಾಯಿ ಮುಖಬೆಲೆಯ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳನ್ನು 4 ರೂ ದರದಲ್ಲಿ ಹಾಗೂ 5ರೂ ಮುಖಬೆಲೆಯ ಪತ್ರಿಕೆಗಳನ್ನು 6ರೂ ದರದಲ್ಲಿ ನಿತ್ಯವೂ ಮಾರಾಟ ಮಾಡಲಾಗಿದ್ದು, ವರ್ಷವಿಡೀ ಇದೇ ಲೆಕ್ಕಾಚಾರದಲ್ಲಿ ಸರ್ಕಾರಿ ಹಣ ದುರುಪಯೋಗವಾಗುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ದೊರೆತ ದಾಖಲೆಗಳು 54 ಪುಟಗಳಿದ್ದು, ಪ್ರತಿ ಪುಟವೂ ಆರ್ಥಿಕ ಅಪರಾಧದ ಸಾಕ್ಷಿ ನೀಡುತ್ತಿದೆ.
ಇನ್ನೂ ಪತ್ರಿಕೆ ಒಳಭಾಗದಲ್ಲಿ ಕರಪತ್ರಗಳನ್ನು ಹಾಕುವುದು ನಿಯಮಬಾಹಿರ ಎಂದು ಆಯಾ ಪತ್ರಿಕೆಗಳೇ ಪ್ರಕಟಣೆ ನೀಡುತ್ತವೆ. ಆದರೆ, ಪತ್ರಿಕೆ ಒಳಗೆ ಕರಪತ್ರ ವಿತರಿಸಿದ ಶುಲ್ಕಗಳ ಬಗ್ಗೆಯೂ ಬಿಲ್’ನಲ್ಲಿ ಮೊತ್ತ ನಮೂದಿಸಲಾಗಿದೆ. `ಜಯರಾಜ ಗೋವಿ ನ್ಯೂಸ್ ಪೆಪರ್ ಎಜನ್ಸಿ ವೃತ್ತಪತ್ರಿಕೆ ವಿತರಕರು’ ಎಂಬ ಹೆಸರಿನಲ್ಲಿ ಸಲ್ಲಿಕೆಯಾದ ಬಿಲ್’ಗಳ ದೃಢೀಕರಣ ಪ್ರತಿಯನ್ನು ಕಾಲೇಜಿನವರು S News Digitel’ಗೆ ಒದಗಿಸಿದ್ದಾರೆ.
ಹಳಸಿದ ಕ್ಯಾಲೆಂಡರ್!
ಹೊಸ ವರ್ಷ ಅಂದರೆ ಜನವರಿಯಲ್ಲಿ ಕ್ಯಾಲೆಂಡರ್ ಖರೀದಿಸುವುದು ವಾಡಿಕೆ. ಆದರೆ, ದಾಖಲೆಗಳ ಪ್ರಕಾರ ಕಾಲೇಜಿಗೆ ಜೂನ್ ಅವಧಿಯಲ್ಲಿ 6 ಪ್ರತಿ ಕ್ಯಾಲೇಂಡರ್ ಪೂರೈಸಲಾಗಿದೆ. ಆರು ತಿಂಗಳ ನಂತರದ ಹಳಸಿದ ಕ್ಯಾಲೆಂಡರ್’ನ್ನು ಸಹ ಕಾಲೇಜಿನವರು ಕಾಸು ಕೊಟ್ಟು ಖರೀದಿಸಿದ್ದಾರೆ.
ಗರಿಷ್ಟ ಮಾರಾಟ ಬೆಲೆ:
ಎಲ್ಲಾ ವಸ್ತುಗಳಿಗೂ ಗರಿಷ್ಟ ಮಾರಾಟ ಬೆಲೆ ಇರುತ್ತದೆ. ಅದಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಅಪರಾಧ. ಇದರೊಂದಿಗೆ ಪತ್ರಿಕಾ ವಿತರಕರಿಗೆ ಪತ್ರಿಕಾ ಕಚೇರಿಯಿಂದ ಉತ್ತಮ ಕಮಿಷನ್ ಸಿಗುತ್ತದೆ. ಅದಾಗಿಯೂ ಸರ್ಕಾರಿ ಕಚೇರಿಗಳ ಖಜಾನೆ ಮೇಲೆ ಬಿಲ್ ವಿದ್ಯೆ ಪ್ರಯೋಗಿಸಿದವರು ಇದೀಗ ಸಿಕ್ಕಿಬಿದ್ದಿದ್ದಾರೆ.
ಸತ್ತವರ ಮನೆಯಲ್ಲಿ ಬಾಡೂಟ!
`ಪ್ರತಿ ತಿಂಗಳು ಬಿಲ್ ಕೊಡುವುದಿಲ್ಲ. ವರ್ಷಕ್ಕೆ-ಎರಡು ವರ್ಷಕ್ಕೆ ದುಬಾರಿ ಬಿಲ್ ನೀಡಿ ಪೀಡಿಸುತ್ತಾರೆ’ ಎಂಬ ದೂರು ಸಾಮಾನ್ಯ. ಈಚೆಗೆ ಸಾವನಪ್ಪಿದವರ ಮನೆಗೆ ಭೇಟಿ ನೀಡಿದ ಪತ್ರಿಕಾ ವಿತರಕ ಸತ್ತವನ ಹೆಸರಿನಲ್ಲಿ ಹಳೆಯ ಬಾಕಿ ಎಂದು 8 ಸಾವಿರ ರೂ ವಸೂಲಿ ಮಾಡಿರುವುದಕ್ಕೆ ಆಧಾರಗಳಿಲ್ಲ. ಅದಾಗಿಯೂ, ಸಾಯುವ ಮೊದಲೇ ಪತ್ರಿಕಾ ಬಿಲ್ ಚುಕ್ತಾಗೊಳಿಸುವುದು ಅವರವರ ಕುಟುಂಬದ ದೃಷ್ಟಿಯಿಂದ ಹಿತ!
ಎಲ್ಲರೂ ಅಂಥವರಲ್ಲ!
ಉತ್ತರ ಕನ್ನಡ ಜಿಲ್ಲೆಯಲ್ಲಿ 50-60 ವರ್ಷಗಳಿಂದ ಪತ್ರಿಕೆ ಹಂಚುತ್ತಿರುವವರಿದ್ದಾರೆ. ಅವರು ಎಂದಿಗೂ ಅನ್ಯರ ಕಾಸಿಗೆ ಆಸೆ ಪಟ್ಟಿಲ್ಲ. ಕಾಸು ಕೊಡದೇ ಪತ್ರಿಕೆ ಓದುವವರಿದ್ದರೂ ಅವರ ಬಾಕಿಯನ್ನು ತಾವೇ ಕಚೇರಿಗೆ ಪಾವತಿಸಿ ಪತ್ರಿಕಾ ಸರಬರಾಜು ಮಾಡುತ್ತಿದ್ದಾರೆ. ಆದರೆ, `ಪತ್ರಿಕಾ ವಿತರಕರದ್ದು ನಿಸ್ವಾರ್ಥವಾದ ಸೇವೆ’ ಎಂದು ಪತ್ರಿಕಾ ವಿತರಕರ ದಿನ ದೊಡ್ಡ ಲೇಖನ ಪ್ರಕಟಿಸಿದವರೇ `ಸೇವೆ ಹೆಸರಿನಲ್ಲಿ ಸೇವನೆ’ ಮಾಡಿ ಸಿಕ್ಕಿಬಿದ್ದಿದ್ದಾರೆ.
ರೋಗದ ವಿರುದ್ಧ ಹೋರಾಟ: ರೋಗಿ ವಿರುದ್ಧ ಅಲ್ಲ!
ಪತ್ರಿಕೆಗಳು ಜ್ಞಾನಾಭಿವೃದ್ಧಿಗೆ ಸಹಕಾರಿ. ಅಲ್ಲಿನ ಅಂಕಣ, ಸಮಾಜದಲ್ಲಿನ ಆಗು-ಹೋಗುಗಳ ಬಗೆಗಿನ ತಿಳುವಳಿಕೆ ಎಲ್ಲರಿಗೂ ಉಪಕಾರಿ. ಹೀಗಾಗಿ ನಿತ್ಯವೂ ಪತ್ರಿಕೆಗಳನ್ನು ಓದಿ.
ದುಡಿದು ತಿನ್ನುವ ಪತ್ರಿಕಾ ವಿತರಕರನ್ನು ಪ್ರೋತ್ಸಾಹಿಸಿ. ಬಡಿದು ತಿನ್ನುವವರನ್ನು ಕೆಡಗಣಿಸಿ!