ಮುಂಡಗೋಡ: ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟದ ಜೊತೆ ಕೊಳೆತ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ವಾಸನೆ ನೋಡಿಯೇ ಮಕ್ಕಳು ವಾಂತಿ ಮಾಡುತ್ತಿದ್ದಾರೆ!
ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ಮೊಟ್ಟೆ ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ. ಸರ್ಕಾರದ ನಿಯಮದ ಪ್ರಕಾರ ಪ್ರತಿ ಮೊಟ್ಟೆ ಕನಿಷ್ಟ 50 ಗ್ರಾಂ ತೂಕವಿರಬೇಕು. ಇದಕ್ಕಾಗಿ ಪ್ರತಿ ಮೊಟ್ಟೆಗೆ 6 ರೂ ಪಾವತಿಯಾಗುತ್ತದೆ. ಆದರೆ, ಇಲ್ಲಿ ವಿತರಿಸುವ ಮೊಟ್ಟೆ ಆ ತೂಕದಲ್ಲಿಲ್ಲ. `6 ರೂಪಾಯಿಗೆ ಮೊಟ್ಟೆ ಸಿಗದ ಅವಧಿಯಲ್ಲಿ ಕಳಪೆ ಮೊಟ್ಟೆ ಖರೀದಿಸಿ ಕೊಡಲಾಗುತ್ತದೆ’ ಎಂಬ ಆರೋಪವೂ ಇದೆ.
ವಾರದ ಎರಡು ದಿನ ಸರ್ಕಾರ ಮೊಟ್ಟೆ ಪೂರೈಸುತ್ತದೆ. ನಾಲ್ಕು ದಿನ ಅಜೀಂ ಪ್ರೇಮ್ ಪೌಂಡೇಶನ್ ನೆರವಿನಲ್ಲಿ ಮೊಟ್ಟೆ ಕೊಡಲಾಗುತ್ತದೆ. ಆದರೆ, ಗುಣಮಟ್ಟದ ಮೊಟ್ಟೆಯಿದ್ದಾಗ ಮಾತ್ರ ಮಕ್ಕಳು ಸೇವಿಸುತ್ತಿದ್ದು, ಕಳಪೆ ಮೊಟ್ಟೆ ಬಂದ ದಿನ ಶಾಲಾ ವಾತಾವರಣವೂ ಹಾಳಾಗುತ್ತಿದೆ.
`11 ಶಾಲೆಯಲ್ಲಿ ಕಳಪೆ ಮೊಟ್ಟೆ ವಿತರಣೆಯಾಗುತ್ತಿದೆ. ಹೊರಭಾಗದಿಂದ ಮೊಟ್ಟೆ ಚನ್ನಾಗಿದ್ದರೂ ಕುದಿಸಿ ಸಿಪ್ಪೆ ತೆಗೆದಾಗ ಕೊಳೆತಿರುವುದು ಕಾಣುತ್ತದೆ’ ಎಂದು ಶಿಕ್ಷಕರೊಬ್ಬರು ಹೇಳಿದರು. `ಉತ್ತಮ ಮೊಟ್ಟೆಯನ್ನು ನೀರಿನಲ್ಲಿ ಹಾಕಿದಾಗ ಅದು ಮುಳುಗುತ್ತದೆ. ಕೊಳೆತ ಮೊಟ್ಟೆ ತೇಲುತ್ತದೆ. ಮೊಟ್ಟೆ ಪಡೆಯುವಾಗಲೇ ಚನ್ನಾಗಿರುವುದನ್ನು ಆರಿಸಬೇಕು’ ಎಂದು ಅಕ್ಷರ ದಾಸೋಹ ಅಧಿಕಾರಿ ರಫೀಕಸಾಬ ಮೀರಾನಾಯಕ ಹೇಳುತ್ತಾರೆ.