ಕಾರವಾರ: ಸಿದ್ಧರದ ಸುರಭಿ ವೃದ್ಧಾಶ್ರಮಕ್ಕೆ ಆರು ತಿಂಗಳ ಹಿಂದೆ ದಾಖಲಾಗಿದ್ದ ವೃದ್ಧನೊಬ್ಬ ಸಾವನಪ್ಪಿದ್ದು, ಆತನ ವಾರಸುದಾರರ ಹುಡುಕಾಟ ನಡೆದಿದೆ.
ಆರು ತಿಂಗಳ ಹಿಂದೆ ಅಪರಿಚಿತರೊಬ್ಬರು 60 ವರ್ಷದ ವೃದ್ಧರನ್ನು ಆಶ್ರಮಕ್ಕೆ ತಂದು ಬಿಟ್ಟಿದ್ದರು. ಆ ವೃದ್ಧರು ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ಎದ್ದು ಓಡಾಡುವ ಹಾಗೆಯೂ ಇರಲಿಲ್ಲ. ಸಮಯಕ್ಕೆ ಸರಿಯಾಗಿ ಊಟ-ತಿಂಡಿಯನ್ನು ಸೇವಿಸುತ್ತಿರಲಿಲ್ಲ.
ಸದಾ ಹಾಸಿಗೆ ಮೇಲೆ ಮಲಗಿರುತ್ತಿದ್ದ ಆ ವೃದ್ಧರನ್ನು ಆಶ್ರಮದ ಸಿಬ್ಬಂದಿ ಉದಯ ನಾಯ್ಕ ಹಾಗೂ ಉಲ್ಲಾಸ ಬಾಬಡೇಕರ್ ನೋಡಿಕೊಳ್ಳುತ್ತಿದ್ದರು. ಸಿದ್ಧರ ಪ್ರಾಥಮಿಕ ಕೇಂದ್ರದ ನರ್ಸ ಬಂದು ಆರೈಕೆ ಮಾಡುತ್ತಿದ್ದರು. ವೃದ್ಧರ ಹೆಸರು, ವಿಳಾಸ ಪತ್ತೆಗೆ ಸಾಕಷ್ಟು ಹುಡುಕಾಟ ನಡೆಸಿದರೂ ಮಾಹಿತಿ ಸಿಕ್ಕಿರಲಿಲ್ಲ.
ಭಾನುವಾರ ಹಾಸಿಗೆ ಮೇಲಿದ್ದ ಅನಾಮಿಕ ವೃದ್ಧ ಊಟ ಮಾಡದ ಬಗ್ಗೆ ಉದಯ ನಾಯ್ಕ ಹಾಗೂ ಉಲ್ಲಾಸ ಬಾಬಡೇಕರ್ ಮಾಹಿತಿ ನೀಡಿದರು. ಆಶ್ರಮದ ವ್ಯವಸ್ಥಾಪಕ ಗೌರೀಶ ಕಲ್ಗುಟ್ಕರ್ ಹಾಗೂ ಕೇರ್ ಟೇಕರ್ ರೋಜಾರ್ ಡಿಸೋಜಾ ವೃದ್ಧರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ಪರಿಶೀಲಿಸಿದ ವೈದ್ಯರು `ಈಗಾಗಲೇ ಅವರು ಸಾವನಪ್ಪಿದ್ದಾರೆ’ ಎಂದು ಘೋಷಿಸಿದರು. ಪ್ರಸ್ತುತ ಆಶ್ರಮದ ಸಿಬ್ಬಂದಿ `ವೃದ್ಧರ ವಾರಸುದಾರರನ್ನು ಹುಡುಕಿಕೊಡಿ’ ಎಂದು ಪೊಲೀಸ್ ದೂರು ನೀಡಿದ್ದಾರೆ.