ಜೊಯಿಡಾ: ಕೆರೆಯಲ್ಲಿ ವ್ಯಕ್ತಿಯೊಬ್ಬ ಮುಳುಗುತ್ತಿದ್ದರೂ ಅದನ್ನು ನೋಡಿದ ಜನ ನೆರವಿಗೆ ಬರಲಿಲ್ಲ. ಹೀಗಾಗಿ ಆತ ಅಲ್ಲಿಯೇ ಸಾವನಪ್ಪಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಧಾರವಾಡದ ಕಲ್ಲೂರಿನ ಮಹಾದೇವ ಸಿದ್ದಪ್ಪ ಹಸರಗಣಿ (39) ಟಾಟಾ ಹಿಟಾಚಿ ಕಂಪನಿಯಲ್ಲಿ ಕೆಲಸಕ್ಕಿದ್ದ. ಸೋಮವಾರ ಜೊಯಿಡಾಗೆ ಬಂದಿದ್ದ ಈತ ಉಳುವಿಗೆ ತೆರಳಿದ್ದ. ಅಲ್ಲಿನ ವೀರಭದ್ರ ದೇವಾಲಯ ಪಕ್ಕದ ಕೆರೆ ಕಂಡು ಈಜಾಡಲು ಹೋಗಿದ್ದ.
ನೀರಿನ ಮದ್ಯಭಾಗದವರೆಗೂ ಸಲೀಸಾಗಿ ಚಲಿಸಿದ ಮಹಾದೇವನಿಗೆ ಮರಳಿ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಸಹಾಯ ಮಾಡುವಂತೆ ದಡದಲ್ಲಿ ನಿಂತಿದ್ದವರನ್ನು ಆತ ಕೇಳಿಕೊಂಡಿದ್ದ. ನೀರಿನಲ್ಲಿ ಮುಳುಗುವ ಅನುಭವ ಆದಾಗ ಜೋರಾಗಿ ಬೊಬ್ಬೆ ಹೊಡೆದಿದ್ದ. ಆದರೆ, ಯಾರೂ ಆತನ ನೆರವಿಗೆ ಹೋಗಲಿಲ್ಲ.
ನೀರಿನಿಂದ ಮೇಲೆ ಬರಲಾಗದೇ ಆತ ಅಲ್ಲಿಯೇ ಮುಳುಗಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದಿದ್ದ. ಕೊನೆಗೆ ಅಲ್ಲಿಯೇ ಸಾವನಪ್ಪಿದ್ದ. 70 ವರ್ಷದ ಆತನ ತಂದೆ ಸಿದ್ದಪ್ಪ ಹಸರಗಣಿ ಊರಿನಿಂದ ಬಂದು ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.



