ಯಲ್ಲಾಪುರ: `ಹವ್ಯಕ ಸಮುದಾಯದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ನಿಂದಿಸಿದ್ದು, ಸೋಮೇಶ್ವರ ನಾಯ್ಕರನ್ನು ಗಡಿಪಾರು ಮಾಡಬೇಕು’ ಎಂದು ತಾಲೂಕಾ ಹವ್ಯಕರ ಸಂಘ ಆಗ್ರಹಿಸಿದೆ. ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ ಶಂಕರ ಭಟ್ಟ ನೇತ್ರತ್ವದಲ್ಲಿ ಸಂಘಟನೆ ಸದಸ್ಯರು ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಪತ್ರ ರವಾನಿಸಿದ್ದಾರೆ.
ಈ ಪತ್ರದ ಪ್ರತಿಯನ್ನು ಗೃಹಸಚಿವರು, ಜಿಲ್ಲಾಧಿಕಾರಿ, ಲೋಕಾಯುಕ್ತರು, ಪೊಲೀಸ್ ಅಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಯುವ ಸೇನೆ ಹಾಗೂ ವಿವಿಧ ಸಂಘಟನೆಯವರಿಗೂ ರವಾನಿಸಿರುವುದಾಗಿ ಹವ್ಯಕ ಸಂಘದವರು ಹೇಳಿಕೊಂಡಿದ್ದಾರೆ. `ಯಲ್ಲಾಪುರ ಪಟ್ಟಣ ಪಂಚಾಯತದ ರವೀಂದ್ರ ನಗರ ಪ್ರತಿನಿಧಿಸುವ ಸೋಮೇಶ್ವರ ನಾಯ್ಕ ವಾಟ್ಸಪ್ ಸ್ಟೇಟಸ್ಸಿನಲ್ಲಿ ಶಿವರಾಮ ಹೆಬ್ಬಾರ್ ಅವರ ವಿರುದ್ಧ ಅಸಂವಿಧಾನಾತ್ಮಕ ಪದ ಪ್ರಯೋಗ ನಡೆಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತಂದಿರುವ ಅವರ ನಡೆಯನ್ನು ಖಂಡಿಸುತ್ತೇವೆ’ ಎಂದು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
`ಸೋಮೇಶ್ವರ ನಾಯ್ಕ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು. ಅವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಹವ್ಯಕರನ್ನು ನಿಂದಿಸಿ ಮಾನಸಿಕ ಹಿಂಸೆ ನೀಡುವವರ ವಿರುದ್ಧ ಕ್ರಮಜರುಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದು ನಿಶ್ಚಿತ’ ಎಂದು ಈ ಪತ್ರದಲ್ಲಿ ಎಚ್ಚರಿಸಿದ್ದಾರೆ. ತಹಶೀಲ್ದಾರ್ ಕಚೇರಿ ಮೂಲಕ ಈ ಪತ್ರವನ್ನು ರವಾನಿಸಿದ್ದಾರೆ. ಪ್ರಮುಖರಾದ ಮುರುಳಿ ಹೆಗಡೆ, ಗೋಪಾಲಕೃಷ್ಣ ಬಟ್ಟ ಹಂಡ್ರಮನೆ, ಪ್ರಶಾಂತ ಹೆಗಡೆ, ಗಣಪತಿ ಮುದ್ದೇಪಾಲ್, ಎಂ ಆರ್ ಹೆಗಡೆ, ಎನ್ ಕೆ ಭಟ್ಟ, ನರಸಿಂಹ ಭಟ್ಟ ಬೋಳಪಾಲ್ ಇತರರು ಇದ್ದರು.



