ಯಲ್ಲಾಪುರ: ಹಳೆಯ ತಹಶೀಲ್ದಾರ್ ಕಚೇರಿ ಮುಂದೆ ಹೊಟೇಲ್ ನಡೆಸುವ ಮಧುಕೇಶ್ವರ ಭಟ್ಟ ಅವರ ಮನೆಯಲ್ಲಿ ಕಳ್ಳತನವಾಗಿದೆ.
ರವೀಂದ್ರ ನಗರದ ಮಧುಕೇಶ್ವರ ಭಟ್ಟ ಅವರು ಬಸ್ ನಿಲ್ದಾಣ ರಸ್ತೆಯಲ್ಲಿ `ಮಧು ಹೊಟೇಲ್’ ನಡೆಸುತ್ತಾರೆ. ತಾವು ದುಡಿದು ಸಂಪಾದಿಸಿದ ಹಣವನ್ನು ಅವರು ಮನೆಯಲ್ಲಿ ಜೋಪಾನವಾಗಿರಿಸಿದ್ದರು. ಮನೆಯಲ್ಲಿ ಮಾಲಕರಿಲ್ಲದ ವಿಷಯ ಅರಿತು ಕಳ್ಳರು ಕಾಸು ಎಗರಿಸಿದ್ದಾರೆ.
ಡಿ 13ರ ಬೆಳಗ್ಗೆ ಮನೆಗೆ ಬೀಗ ಹಾಕಿ ಅವರು ಹೊರ ಹೋಗಿದ್ದರು. ಡಿ 14ರ ಬೆಳಗ್ಗೆ 9.45ಕ್ಕೆ ಮರಳಿದಾಗ ಮನೆಯ ಬೀಗ ಒಡೆದಿತ್ತು. ಮನೆ ಒಳಗೆ ಹೋಗಿ ಪರಿಶೀಲಿಸಿದಾಗ ಬೆಡ್ ರೂಂ ಒಳಗಿನ ಕಪಾಟಿನ ಬಾಗಿಲನ್ನು ಕಳ್ಳರು ಮುರಿದಿದ್ದರು. ಕಪಾಟಿನ ಒಳಗೆ ಸೀರೆಯಲ್ಲಿ ಸುತ್ತಿಟ್ಟಿದ್ದ 50 ಸಾವಿರ ರೂ ಹಣವನ್ನು ಕಳ್ಳರು ಕದ್ದಿದ್ದಾರೆ.
`ಕಳ್ಳರನ್ನು ಪತ್ತೆ ಮಾಡಿ, ತಮ್ಮ ಹಣವನ್ನು ಹುಡುಕಿಕೊಡಿ’ ಎಂದು ಮಧುಕೇಶ್ವರ ಭಟ್ಟ ಅವರು ಪೊಲೀಸ್ ದೂರು ನೀಡಿದ್ದಾರೆ.