ಉತ್ತರ ಕನ್ನಡ ಜಿಲ್ಲೆಯ ಮಣ್ಣಿನ ಪರಂಪರೆಯಲ್ಲಿ ದೈವ ಆರಾಧನೆಗೆ ತನ್ನದೇ ಆದ ಮಹತ್ವವಿದೆ. ಶತಮಾನಗಳ ಹಿಂದಿನಿoದಲೂ ಈ ಭಾಗದಲ್ಲಿ ಹರಕೆ ಹೊತ್ತು ಒಳಿತು ಕಂಡವರಿದ್ದಾರೆ. ಮೊನ್ನೆ ಚಿನ್ನ ಕಳೆದುಕೊಂಡಿದ್ದ ವಿದ್ಯಾರ್ಥಿನಿಗೆ ಬೊಮ್ಮಯ್ಯ ದೇವರು ಚಿನ್ನ ಮರಳಿಸಿದ ಸುದ್ದಿ ಕೇಳಿ ನಾಸ್ತಿಕರು ಸಹ ದೇವರ ಮಹಿಮೆಗೆ ಶರಣಾಗಿದ್ದಾರೆ.
ಕಾರವಾರದಿಂದ ಮಂಗಳೂರಿನವರೆಗೂ `ಬೊಮ್ಮಯ್ಯ’ ಎಂಬ ಹೆಸರಿನ ಸಾವಿರಾರು ಜನ ಸಿಗುತ್ತಾರೆ. ಈ ಹೆಸರಿಗೆ ಮೂಲ ಕಾರಣ ಅಂಕೋಲಾ ತಾಲೂಕಿನ ಬಾಸಗೋಡು ಬಳಿಯ ಕೋಗ್ರೆ ಗುಡ್ಡದ ಮೇಲಿರುವ ಬೊಮ್ಮಯ್ಯ ದೇವರು. ನಂಬಿದ ಯಾರನ್ನು ಈ ದೇವರು ಕೈ ಬಿಟ್ಟಿಲ್ಲ ಎನ್ನುವುದಕ್ಕೆ ನೂರಾರು ನಿದರ್ಶನಗಳಿವೆ. ಕಳೆದ ವರ್ಷ ಬೊಮ್ಮಯ್ಯ ದೇವರಿಗೆ ಶಿಲಾಮಯ ದೇವಾಲಯ ನಿರ್ಮಾಣವಾಗಿದ್ದು, ಇಲ್ಲಿನ ಪರಿವಾರ ದೇವರಿಗಳಿಗೂ ಸ್ಥಾನ ಕಲ್ಪಿಸಲಾಗಿದೆ. ಅಮ್ಮನವರು, ಮಾಣಬೀರ, ಹುಲಿಬೀರ, ಬೀರ, ರಾಕೇಶ್ವರ, ರಣರಾಕೇಶ್ವರ, ಹೊಲೆ ವಟರ, ಬೇಡ-ಬೇಡತಿ, ಅಚ್ಚಕನ್ಯೆ-ದೇವಕನ್ಯೆ, ಮಾರುಗುತ್ತು, ಬಂಡಾರ ದೇವ, ಈಶ್ವರ, ತೋಟದ ಜಟ್ಟಿಗ ಎಂಬ ದೈವಗಳ ಸಂಕುಲವೇ ಅಂಕೋಲೆ ಬಾಸಗೋಡಿನ ಕೋಗ್ರೆ ಗುಡ್ಡದ ಮೇಲಿದೆ.
ಮೊನ್ನೆ ಕುಮಟಾದ ವಿದಾತ್ರಿ ಸಂಸ್ಥೆ ಸರಸ್ವತಿ ಪಿಯು ಕಾಲೇಜು `ಕಲಾಂಜಲಿ’ ಎಂಬ ಕಾರ್ಯಕ್ರಮ ಆಯೋಜಿಸಿದ್ದು, ವೇದಿಕೆ ಪ್ರವೇಶ ದ್ವಾರದ ಬಳಿ ಬೊಮ್ಮಯ್ಯ ದೇವರ ಪ್ರತಿಮೆ ಮಾಡಿದ್ದರು. ವಿದ್ಯಾರ್ಥಿನಿ ಶ್ರೀದೇವಿ ನಾಯಕ ಅವರು ಬೊಮ್ಮಯ್ಯ ದೇವರ ಮಹಾತ್ಮೆಯ ಬಗ್ಗೆ ಅಲ್ಲಿ ಆಗಮಿಸುವವರಿಗೆ ವಿವರಿಸುತ್ತಿದ್ದರು. `ಕರಾವಳಿ ಭಾಗದಲ್ಲಿಯೇ ಅತಿ ದೊಡ್ಡ ಬಂಡಿ ಹಬ್ಬ ಕೋಗ್ರೆ ದೇವರದ್ದಾಗಿದ್ದು, ನಾಲ್ಕು ಕಲಶ ಹೊತ್ತು ಇಲ್ಲಿ ಹಬ್ಬ ಆಚರಿಸಲಾಗುತ್ತದೆ. ಈ ದೇವರಿಗೆ ಹಾಗೂ ಚಿನ್ನಕ್ಕೆ ಅವಿನಾಭಾವ ಸಂಬoಧವಿದ್ದು, ಅನೇಕರು ಹರಕೆ ರೂಪದಲ್ಲಿ ಚಿನ್ನ ಸಲ್ಲಿಸುತ್ತಾರೆ. ಈ ಶ್ರೀಮಂತ ದೇವರಲ್ಲಿ ಬೇಡಿಕೊಂಡರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ’ ಎಂದು ಶ್ರೀದೇವಿ ನಾಯಕ ವಿವರಿಸುತ್ತಿದ್ದರು. ಕಥೆ ಕೇಳಿದ ಭಕ್ತರೆಲ್ಲರೂ ಕುದುರೆ ಮೇಲೆ ಕೂತು ಈಟಿ ಹಿಡಿದಿದ್ದ ಬೊಮ್ಮಯ್ಯ ದೇವರಿಗೆ ನಮಿಸಿ ವೇದಿಕೆ ಕಡೆ ತೆರಳುತ್ತಿದ್ದರು.
ಕಾರ್ಯಕ್ರಮ ಮುಗಿದ ನಂತರ ಕಾಲೇಜಿನ ಫೋನು ರಿಂಗಾಯಿತು. `ವಿದ್ಯಾರ್ಥಿನಿಯೊಬ್ಬರು ಧರಿಸಿದ್ದ ಒಂದುವರೆ ತೊಲೆಯ ಬಂಗಾದರ ಚೈನು ಕಾಣೆಯಾಗಿದೆ’ ಎಂಬ ಸುದ್ದಿ ಎಲ್ಲರ ತಲೆಬಿಸಿಗೆ ಕಾರಣವಾಯಿತು. ಆ ವಿದ್ಯಾರ್ಥಿನಿ ಓಡಾಡಿದ ಜಾಗದಲ್ಲೆಲ್ಲ ಹುಡುಕಾಟ ನಡೆಯಿತು. ಎಷ್ಟು ಹುಡುಕಿದರೂ ಚಿನ್ನದ ಸುಳಿವಿಲ್ಲ. ಆಕೆಯ ಪಾಲಕರು ಆಗಮಿಸಿ ಹುಡುಕಾಡಿದರು. ವಿದ್ಯಾರ್ಥಿಗಳೆಲ್ಲರೂ ಎಲ್ಲಾ ಕಡೆ ತಡಕಾಡಿದರು. ಆದರೆ, ಚಿನ್ನದ ಸರ ಮಾತ್ರ ಪತ್ತೆಯಾಗಲಿಲ್ಲ. ಕೊನೆಗೆ ಅಲ್ಲಿದ್ದ ಕಗಾಲ ಚಿದಾನಂದ ಬಂಡಾರಿ ಅವರು ಉಪನ್ಯಾಸಕರ ಸಾಕ್ಷಿಯಾಗಿ ದೇವರ ಮೊರೆ ಹೋದರು. ವೇದಿಕೆ ದ್ವಾರದಲ್ಲಿರಿಸಿದ್ದ ಬೊಮ್ಮಯ್ಯ ದೇವರಿಗೆ ಪುಷ್ಪ ಸಲ್ಲಿಸಿ ಕೈ ಮುಗಿದರು. `ಚಿನ್ನದ ಸರ ಹುಡುಕಿ ಕೊಟ್ಟರೆ `ನಿನ್ನ ಕ್ಷೇತ್ರಕ್ಕೆ ಬಂದು ಪೂಜೆ ಕೊಡಿಸುವೆ’ ಎಂದು ಬೇಡಿಕೊಂಡರು.
ತಾಸುಗಳ ಕಾಲ ಹುಡುಕಿದರೂ ಸಿಗದ ಚೈನು ದೇವರ ಮೊರೆ ಹೋದ 10 ನಿಮಿಷದಲ್ಲಿ ಸಿಕ್ಕಿತು. ಚಿನ್ನ ಕಳೆದುಕೊಂಡಿದ್ದ ಬಾಲಕಿಯ ಕಣ್ಣಿಗೆ ಸರ ಕಂಡಿತು. `ಚೈನು ಸಿಕ್ಕಿತು’ ಎಂಬ ಕೂಗು ಕೇಳಿ ಎಲ್ಲರೂ ನಿರಾಳರಾದರು. ದೇವರ ಪವಾಡ ಅರಿತು ಮತ್ತೊಮ್ಮೆ ಭಕ್ತಿಯಿಂದ ನಮಿಸಿದರು. ಚೈನು ಕಳೆದುಕೊಂಡ ವಿದ್ಯಾರ್ಥಿನಿಯ ಜೊತೆ ಅವರ ಪಾಲಕರಿಗೂ ದೇವ ಶಕ್ತಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. `ಅಂಕೋಲಾ ಬಾಸಗೋಡಿಗೆ ಹೋಗಿ ಬೊಮ್ಮಯ್ಯ ದೇವರಿಗೊಂದು ಪೂಜೆ ಕೊಟ್ಟು ಬನ್ನಿ’ ಎಂದು ಚಿದಾನಂದ ಬಂಡಾರಿ ಅವರು ವಿದ್ಯಾರ್ಥಿನಿ ಪಾಲಕರಿಗೆ ತಿಳಿಸಿದ್ದು, ನ್ಯಾಯವಾದಿ ನಾಗರಾಜ ನಾಯಕ ಅವರು `ಬನ್ನಿ, ಪೂಜೆ ಮಾಡಿಸಿಕೊಡುವೆ’ ಎಂದು ಒಪ್ಪಿಕೊಂಡರು.