ಕಮಲಾ ಹೆಗಡೆ ಮಾತನಾಡುವುದಕ್ಕಿಂತಲೂ ಹಾಡುವುದೇ ಹೆಚ್ಚು. ಕಮಲಾ ಹೆಗಡೆ ಅವರು ಭಾಗವಹಿಸಿದ ಮದುವೆ-ಮುಂಜಿಗಳಲ್ಲಿ ಅವರ ಹಾಡಿಲ್ಲದೇ ಶಾಸ್ತ್ರಗಳು ಮುಂದೆ ಸಾಗುವುದೇ ಇಲ್ಲ!
ಕಮಲಾ ಹೆಗಡೆ ಅವರ ವಯಸ್ಸು 80ರ ಆಸುಪಾಸು. ಅದಾಗಿಯೂ ಅವರ ಕಂಚಿನ ಕಂಠಕ್ಕೆ ಇನ್ನೂ ವಯಸ್ಸಾಗಿಲ್ಲ. ಕಾಡಿನ ಕಾಳು ಮೆಣಸು ಅಗೆದು ಹಾಡಲು ಶುರು ಮಾಡಿದರು ಎಂದರೆ ಹಸುಗೂಸು ನಿದ್ದೆ ಮಾಡುತ್ತದೆ. ದೊಡ್ಡವರು ತಲೆದೂಗುತ್ತಾರೆ. ಸಂಗೀತ ಜ್ಞಾನವಿದ್ದವರು ಚಪ್ಪಾಳೆಯ ಸುರಿಮಳೆ ಸುರಿಸುತ್ತಾರೆ. ಸರಿಸುಮಾರು ಸಾವಿರಕ್ಕೂ ಅಧಿಕ ಹಾಡುಗಳು ಅವರಿಗೆ ಕಂಠಪಾಠವಾಗಿದೆ.
ಕಮಲಾ ಹೆಗಡೆ ಅವರ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯತದ ಶೇಡಿ ದಂಟಕಲ್. ಬಾಲ್ಯದಲ್ಲಿ ಕಲಿಕೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದ ಅವರಿಗೆ ಹಳ್ಳಿಯ ಹವ್ಯಕ ಹಾಡನ್ನು ಕಲಿಸಿದವರು ಅವರ ಅಜ್ಜಿ ಕಾವೇರಿ. ಸುಮಧುರವಾಗಿ ಭಕ್ತಿ ಗೀತೆಗಳನ್ನು ಹಾಡುತ್ತಿದ್ದ ತಂದೆ ಗೋಪಾಲಕೃಷ್ಣ ಹೆಗಡೆ ಅವರಿಂದ ಭಜನೆ ಕಲಿತರು. ಐದನೇ ತರಗತಿಯವರೆಗೆ ಓದಿ ಹಾಡುಗಳ ಸಂಗ್ರಹ ಮುಂದುವರೆಸಿದರು. ತಮ್ಮ 12ನೇ ವಯಸ್ಸಿನಿಂದ ಅವರು ಹಾಡಲು ಶುರು ಮಾಡಿದವರು ಈವರೆಗೂ ನಿಲ್ಲಿಸಿಲ್ಲ.
ಕಮಲಾ ಹೆಗಡೆ ಅವರು ಹಾಡುವುದು ಮಾತ್ರವಲ್ಲ. ಬಟ್ಟೆಯ ಬ್ಯಾಗು ತಯಾರಿಸುತ್ತಾರೆ. ಆರತಿಕಟ್ಟುಗಳನ್ನು ಸಿದ್ದಪಡಿಸುತ್ತಾರೆ. ಬಿಡುವಿದ್ದಾಗ ಬೀಸಣಿಕೆ ತಯಾರಿಸುವುದು ಅವರಿಗೆ ಗೊತ್ತಿದೆ. ವಿವಿಧ ಭಾಗಗಳಿಂದ ಗಿಡಗಳನ್ನು ತಂದು ಮನೆ ಮುಂದೆ ಉದ್ಯಾನವನ್ನು ಮಾಡಿದ್ದಾರೆ. ಈ ಎಲ್ಲದರ ನಡುವೆ ಮಕ್ಕಳಾಗದವರಿಗೆ ನಾಟಿ ಔಷಧಿಯನ್ನು ಸಹ ಕೊಡುತ್ತಾರೆ. ಕಮಲಾ ಹೆಗಡೆಯವರ ಪತಿ ಮಧುಕೇಶ್ವರ ಹೆಗಡೆ ಅವರು ಸಹ ಬಳ್ಳಿಗಳನ್ನು ಬಳಸಿ ಕರಕುಶಲ ವಸ್ತು ತಯಾರಿಸುತ್ತಾರೆ.