ಯಲ್ಲಾಪುರ: ಬಳಗಾರಿನ ಶಾಲೆಗುಡ್ಡೆ ಕಾಲೋನಿಯ 25 ಮನೆಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ರಾಜಕೀಯ ದ್ವೇಷದ ಕಾರಣದಿಂದ ಜೀವಜಲ ಸರಬರಾಜು ಸ್ಥಗಿತವಾಗಿದ್ದು, ಕುಡಿಯುವ ನೀರಿಗಾಗಿ ಇಲ್ಲಿನ ಒಂದುವರೆ ಕಿಮೀ ದೂರದ ಜನ ಖಾಸಗಿ ತೋಟದ ಬಾವಿಯ ಮೊರೆ ಹೋಗಿದ್ದಾರೆ.
ಯಲ್ಲಾಪುರ ತಾಲೂಕಿನ ದೆಹಳ್ಳಿ ಗ್ರಾಮ ಪಂಚಾಯತಗೆ ಶಾಲೆಗುಡ್ಡೆ ಜನ ಸಮಯಕ್ಕೆ ಸರಿಯಾಗಿ ನೀರಿನ ತೆರಿಗೆ ಪಾವತಿಸುತ್ತಾರೆ. ಇಲ್ಲಿನ ಮನೆಗಳಿಗೂ ಪಂಚಾಯತ ನಲ್ಲಿ ಸಂಪರ್ಕ ನೀಡಿದೆ. ಆದರೆ, ಕಳೆದ ಎರಡು ತಿಂಗಳಿನಿAದ ಕುಡಿಯುವ ನೀರು ಸರಬರಾಜಾಗಿಲ್ಲ. ಸಮೀಪದಲ್ಲಿನ ಬೋರಿನಲ್ಲಿ ಸಹ ನೀರಿಲ್ಲ. ಹೀಗಾಗಿ ಆ ಭಾಗದ ಜನ ಒಂದುವರೆ ಕಿಮೀ ದೂರದ ಆಚಾರತಗ್ಗು ಎಂಬ ಪ್ರದೇಶದ ಖಾಸಗಿ ತೋಟದಿಂದ ನೀರು ತರುತ್ತಿದ್ದಾರೆ.
20 ಲಕ್ಷ ರೂಪಾಯಿಗೂ ಅಧಿಕ ಸ್ವಂತ ಸಂಪನ್ಮೂಲ ಹೊಂದಿರುವ ದೆಹಳ್ಳಿ ಗ್ರಾಮ ಪಂಚಾಯತಗೆ ಕುಡಿಯುವ ನೀರು ಸರಬರಾಜು ಮಾಡುವುದು ದೊಡ್ಡ ಕೆಲಸವೇ ಅಲ್ಲ. ಆದರೆ, ಗ್ರಾ ಪಂ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಬಣದ ಅಭ್ಯರ್ಥಿಯನ್ನು ಆ ಭಾಗದವರು ಬೆಂಬಲಿಸಿಲ್ಲ ಎಂಬ ಕಾರಣಕ್ಕಾಗಿ ನೀರುಣಿಸದೇ ಸತಾಯಿಸುತ್ತಿದ್ದಾರೆ ಎಂಬುದು ಈಗಿನ ದೂರು. ಪ್ರಸ್ತುತ ಆ ಭಾಗದ ಗ್ರಾ ಪಂ ಸದಸ್ಯರಾಗಿರುವ ವಿಶ್ವನಾಥ ಹಳೆಮನೆ ಸಹ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.
`ಶಾಲೆಗುಡ್ಡಿ ಕಾಲೋನಿಯಲ್ಲಿ ಒಂದು ಬೋರ್‌ವೆಲ್ ಇದ್ದು, ಅದರಲ್ಲಿಯೂ ನೀರಿಲ್ಲ. ಹಲವು ಸಮಯದ ನಂತರ ಕೆಂಪು ಬಣ್ಣದ ಕಲುಷಿತ ನೀರು ಬರುತ್ತಿದೆ. ಕೆಲವರು ಅನಿವಾರ್ಯವಾಗಿ ಅದನ್ನು ಸೇವಿಸಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ’ ಎಂದು ವಿಶ್ವನಾಥ ಹಳೆಮನೆ ಅಳಲು ತೋಡಿಕೊಂಡರು. ಡಿ 27ರ ಒಳಗೆ ಪ್ರತಿ ಮನೆಗೂ ನೀರು ಸರಬರಾಜು ಆಗದೇ ಇದ್ದರೆ ತಾ ಪಂ ಕಚೇರಿ ಎದುರು ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದರು.