ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಬೆಳಗಾವಿಯ ಅಧೀವೇಶನದ ಬಳಿ ತಲುಪಿದ್ದು, ಸೋಮವಾರ ವಿವಿಧ ಶಾಸಕ-ಸಚಿವರು ಪ್ರತಿಭಟನಾಕಾರರ ಅಳಲು ಆಲಿಸಿದ್ದಾರೆ. ಸಚಿವ ಶಿವರಾಜ ತಂಗಡಗಿ, ವಿವಿಧ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ ಹಾಗೂ ಎನ್ ಎಚ್ ಕೋನರೆಡ್ಡಿ ಪ್ರತಿಭಟನಾಕಾರರನ್ನು ಮಾತನಾಡಿಸಿದ್ದಾರೆ.
`ಕದಂಬ ಕನ್ನಡ ಜಿಲ್ಲೆ ರಚನೆಯ ಕುರಿತು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಗಮನಕ್ಕೆ ತರುವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು. `ಪ್ರತ್ಯೇಕ ಜಿಲ್ಲೆ ಒಂದೆರಡು ದಿನದಲ್ಲಿ ಆಗುವುದಲ್ಲ. ಈ ಬಗ್ಗೆ ಇನ್ನಷ್ಟು ಚರ್ಚೆಯೂ ನಡೆಯಬೇಕು’ ಎಂದು ಶಾಸಕ ಶಿವರಾಮ ಹೆಬ್ಬಾರ್ ಅಭಿಪ್ರಾಯವ್ಯಕ್ತಪಡಿಸಿದರು. `ಬನವಾಸಿ ಹಾಗೂ ಗೋಕರ್ಣ ತಾಲೂಕು ರಚನೆಗಾಗಿ ವಿಧಾನಸಭೆಯಲ್ಲಿ ವಿಷಯ ಮಂಡಿಸುವೆ’ ಎಂದು ಭೀಮಣ್ಣ ನಾಯ್ಕ ಹೇಳಿದರು.
`ಪ್ರತಿ ಪಂಚಾಯತ ಮಟ್ಟದಲ್ಲಿ ಹೋರಾಟ ನಡೆಸಿ ಸಹಿ ಸಂಗ್ರಹ ಅಭಿಯಾನ ಹಾಗೂ ರಥಯಾತ್ರೆ ನಡೆಸುವೆ’ ಎಂದು ಈ ವೇಳೆ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಘೋಷಿಸಿದರು. 500ಕ್ಕೂ ಅಧಿಕ ಜನ ಈ ಹೋರಾಟದಲ್ಲಿ ಭಾಗವಹಿಸಿದ್ದರು