ಸಿದ್ದಾಪುರ: ಬೈಕುಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಯುವಕನೊಬ್ಬ ಸಾವನಪ್ಪಿದ್ದಾನೆ. ಈ ಅಪಘಾತಕ್ಕೆ ನಿವೃತ್ತ ಬ್ಯಾಂಕ್ ನೌಕರನ ನಿರ್ಲಕ್ಷ್ಯ ಕಾರಣ.
ಡಿ 15ರ ರಾತ್ರಿ ಸಿದ್ದಾಪುರ ಕುಮಟಾ ರಸ್ತೆಯಲ್ಲಿ ಆಳಕೋಡು ಸೀತೆಕೆರೆಯ ನಿವೃತ್ತ ಬ್ಯಾಂಕ್ ನೌಕರ ಸೀತಾರಾಮ ನಾಯ್ಕ ತಮ್ಮ ಬುಲೇಟ್ ಬೈಕ್ ಓಡಿಸುತ್ತಿದ್ದರು. ಬೇಡ್ಕಣಿಯ ಗುಂಜಗೋಡು ಕ್ರಾಸಿನ ಬಳಿ ಮುಖ್ಯ ರಸ್ತೆಯ ವಾಹನ ಗಮನಿಸದೇ ಏಕಾಏಕಿ ತಮ್ಮ ಬೈಕನ್ನು ಬಲಕ್ಕೆ ತಿರುಗಿಸಿದರು.
ಇದೇ ವೇಳೆ ಸಿದ್ದಾಪುರ ಕಡೆಯಿಂದ ಕುಮಟಾ ಕಡೆ ಬೈಕು ಓಡಿಸಿಕೊಂಡು ಬರುತ್ತಿದ್ದ ದೊಡ್ಮನೆಯ ನವೀನ ಗೌಡ (22) ಅವರಿಗೆ ಬುಲೆಟ್ ಬೈಕ್ ಗುದ್ದಿತು. ಪರಿಣಾಮ ನವೀನ ಗೌಡ ಅವರು ತಮ್ಮ ಬೈಕಿನ ಮೇಲಿನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ಗುದ್ದಿತು. ಜೊತೆಗೆ ನವೀನ ಗೌಡ ಸಹ ನೆಲಕ್ಕೆ ಬಿದ್ದು ಸಾವಪ್ಪಿದರು.
ನವೀನ ಗೌಡ ಅವರ ಬೈಕು ಗುದ್ದಿದ ರಭಸಕ್ಕೆ ಸೊರಬದ ನಾಗೇಂದ್ರಪ್ಪ ಅವರ ಬೈಕು ಸಹ ನೆಲಕ್ಕೆ ಬಿದ್ದಿದ್ದು, ಅವರು ಗಾಯಗೊಂಡರು. ಈ ಎಲ್ಲಾ ಅವಾಂತರಗಳಿಗೆ ಸೀತಾರಾಮ ನಾಯ್ಕ ಅವರೇ ಕಾರಣ ಎಂದು ಮೋಹನ ಮಾಬ್ಲಾ ಗೌಡ ಪೊಲೀಸ್ ದೂರು ನೀಡಿದ್ದಾರೆ.