ವೇದ ಮತ್ತು ವಿಜ್ಞಾನಕ್ಕೆ ಇರುವ ಸಂಬoಧದ ಬಗ್ಗೆ ವಿಶ್ವಕ್ಕೆ ಪರಿಚಯಿಸುವ `ಸುಮೇರು ಜ್ಯೋತಿರ್ವನ’ ಶಿರಸಿ – ಯಲ್ಲಾಪುರ ರಸ್ತೆಯ ಕಾಗಾರಕೊಡ್ಲು ಎಂಬ ಊರಿನಲ್ಲಿದೆ.
ಇಲ್ಲಿ ಪ್ರತಿ ದಿನ ಆಯಾ ದಿನದ ನಕ್ಷತ್ರಕ್ಕೆ ಸಂಬoಧಿಸಿ ನೆಡಲಾದ ವೃಕ್ಷಕ್ಕೆ ಪೂಜೆ ಹಾಗೂ ಆ ನಕ್ಷತ್ರಕ್ಕೆ ಸಂಬoಧಿಸಿದ ಹೋಮ ನಡೆಯುತ್ತದೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ `ಸುಮೇರು ಜ್ಯೋತಿರ್ವನ’ ಸ್ಥಾಪನೆಯಾಗಿದ್ದು, ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ಪ್ರಾಧ್ಯಾಪಕ ಡಾ ನಾಗೇಶ ಭಟ್ ಕೆ ಸಿ ಅವರು ಇದರ ರೂವಾರಿ. ಅಧ್ಯಯನ, ಸಂಶೋಧನೆ ಜೊತೆಗೆ ಆಸಕ್ತಿಯಿಂದ ಆಗಮಿಸುವವರಿಗೆ ಇಲ್ಲಿ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ.
ಅದರಲ್ಲಿಯೂ ಮುಖ್ಯವಾಗಿ ಕೃತಕವಾದ ಲಘು ಆಕಾಶ ಅಚ್ಚರಿಯೇ ಸರಿ. ಆಕಾಶದಲ್ಲಿ ಕಂಡುಬರುವ ವಿದ್ಯಮಾನಗಳನ್ನು ಕೃತಕವಾಗಿ ಸೃಷ್ಟಿಸಿ ಆ ಮೂಲಕ ಗೃಹ, ನಕ್ಷತ್ರಗಳನ್ನು ತೋರಿಸಲಾಗುತ್ತದೆ. ಆಕಾಶದ ವಿದ್ಯಮಾನಗಳ ಕುರಿತು ಆಸಕ್ತಿ ಹೊಂದಿರುವವರಿಗೆ ಈ ಲಘು ತಾರಾಲಯದಲ್ಲಿ ಭಾರತೀಯ ಜ್ಯೋತಿರ್ವಿಜ್ಞಾನದಿಂದ ಗೃಹ, ನಕ್ಷತ್ರ, ರಾಶಿ ಮೊದಲಾದ ವಿಚಾರಗಳನ್ನು ಸರಳವಾಗಿ ತಿಳಿಸಿಕೊಡಲಾಗುತ್ತದೆ. ನಿತ್ಯ ಬಳಕೆಯಲ್ಲಿರುವ ಅಶ್ವಿನಿ, ಭರಣಿ ಇತ್ಯಾದಿ 27 ನಕ್ಷತ್ರ ಪುಂಜಗಳ ಜೊತೆ ಅವುಗಳ ಆಕೃತಿಗಳನ್ನು ಇಲ್ಲಿ ಸ್ಪಷ್ಟವಾಗಿ ನೋಡಬಹುದು. ನಕ್ಷತ್ರಗಳು ನಿರ್ದಿಷ್ಟವಾಗಿ ಆಕಾಶದ ಯಾವ ಭಾಗದಲ್ಲಿ ಮತ್ತು ಎಷ್ಟು ಅಂತರದಲ್ಲಿ ಕಾಣುತ್ತವೆ ಎಂದು ಸಹ ಇಲ್ಲಿ ಗೊತ್ತಾಗುತ್ತದೆ.
ಸಪ್ತರ್ಷಿ ಮಂಡಲ, ಅರುಂಧತಿ, ಧ್ರುವ, ಮೃಗವ್ಯಾದ, ಮಹಾಶ್ವಾನ ಮುಂತಾದ ಅನೇಕ ವಿಶಿಷ್ಟ ತಾರಾಪುಂಜಗಳನ್ನು ಪರಿಚಯಿಸಿಕೊಳ್ಳಬಹುದು. ಹನ್ನೆರಡು ರಾಶಿಗಳ ವಿಭಾಗ ಹೇಗೆ? ನಾವು ಲೆಕ್ಕಿಸುವ ಸಮಯವನ್ನು ಯಾವ ವೃತ್ತ ಗಣಿತದಿಂದ ನಿರ್ಣಯಿಸಲಾಗುತ್ತದೆ? ಸೂರ್ಯನು ಮೇಷಾದಿ ಸಂಕ್ರಾoತಿ ವೃತ್ತಕ್ಕೆ ಬರುವುದು ಎಂದರೇನು? ಸೂರ್ಯೋದಯ, ಸೂರ್ಯಾಸ್ತ, ಗ್ರಹಣಗಳ ಪರಿಕಲ್ಪನೆ, ಅಮಾವಾಸ್ಯೆ ಹುಣ್ಣಿಮೆಗಳಲ್ಲೇ ಸೂರ್ಯ, ಚಂದ್ರ ಗ್ರಹಣಗಳು ಏಕೆ ಸಂಭವಿಸುತ್ತವೆ? ಎಂಬ ಪ್ರಶ್ನೆಗಳಿಗೆ ಇಲ್ಲಿ ಆಧ್ಯಾತ್ಮದ ಜೊತೆ ವೈಜ್ಞಾನಿಕವಾಗಿಯೂ ಉತ್ತರ ಸಿಗುತ್ತದೆ.
ಮಾಹಿತಿ: ಗಣಪತಿ ಜೋಶಿ ಹಣಕೋಣ, ಕಾರವಾರ
Discussion about this post