ಹೊನ್ನಾವರ: ಯಲ್ಲಾಪುರ ಅರ್ಬನ್ ಬ್ಯಾಂಕಿನ ಕುಮಟಾ ಶಾಖೆಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಗಣೇಶ ನಾಯ್ಕ ಕಾಣೆಯಾಗಿದ್ದಾರೆ. ಕಡತೋಕಕ್ಕೆ ಹೋಗಿ ಬರುವುದಾಗಿ ಹೇಳಿ ಹೊರಟ ಅವರು ನಂತರ ಮನೆಗೆ ಮರಳಿಲ್ಲ.
ಕಡತೋಕ ಹೆಬ್ಳೆಕೊಪ್ಪದ ಗಣೇಶ ಚನ್ನಪ್ಪ ನಾಯ್ಕ (50) ಅವರು ಕಳೆದ ಅನೇಕ ವರ್ಷಗಳಿಂದ ಪಿಗ್ಮಿ ಕಲೆಕ್ಟರ್ ಆಗಿದ್ದರು. ತಾಯಿ ನಾಗವೇಣಿ, ಪತ್ನಿ ಲತಾ ಹಾಗೂ ಮಕ್ಕಳಾದ ಸುಮಿತ ಹಾಗೂ ಸುಚೇತ ಜೊತೆ ಅವರು ವಾಸವಾಗಿದ್ದರು. ಡಿ 16ರ ಬೆಳಗ್ಗೆ ಕಡತೋಕಗೆ ಹೋಗಿ ಬರುವುದಾಗಿ ಹೋದ ಅವರು ಮನೆಗೆ ಮರಳಿದ್ದರು. ಅದಾದ ನಂತರ ಮತ್ತೆ ಹೊರಗೆ ಹೋದ ಅವರು ರಾತ್ರಿಯಾದರೂ ಮನೆಗೆ ಮರಳಿಲ್ಲ. ರಾತ್ರಿ 10 ಗಂಟೆ ಒಳಗೆ ಮರಳುತ್ತಿದ್ದ ಅವರು ಮರುದಿನ ಹುಡುಕಾಟ ನಡೆಸಿದರೂ ಸಿಕ್ಕಿಲ್ಲ.
ಇನ್ನೂ ಅವರ ಮೊಬೈಲ್’ಗೆ ಫೋನ್ ಮಾಡಿದರೆ ಅದು ಸ್ವಿಚ್ ಆಫ್ ಬರುತ್ತಿದೆ. ಅವರ ಎರಡು ಫೋನ್ ನಂ ಸಂಪರ್ಕ ಸಾಧ್ಯವಾಗುತ್ತಿಲ್ಲ. ಸಂಬoಧಿಕರು – ಸ್ನೇಹಿತರ ಜೊತೆ ಬ್ಯಾಂಕ್ ಸಿಬ್ಬಂದಿ ಸಹ ಅವರ ಹುಡುಕಾಟ ನಡೆಸಿದರು. ಅವರು ಸಿಕ್ಕಿಲ್ಲ. ಅವರು ಕೊಂಡೊಯ್ದ ಬೈಕ್ ಸಹ ಪತ್ತೆಯಾಗಿಲ್ಲ. ಈ ಹಿನ್ನಲೆ `ಗಣೇಶ ನಾಯ್ಕ ಅವರನ್ನು ಹುಡುಕಿಕೊಡಿ’ ಎಂದು ಅವರ ಪತ್ನಿ ಲತಾ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಹ ಶೋಧ ಕಾರ್ಯ ನಡೆಸಿದ್ದಾರೆ.