ಹೊನ್ನಾವರ: ಆಡುಕುಳದ ಕಿರಣ ಗೌಡ ಅವರು ದಾಸ್ತಾನು ಮಾಡಿದ್ದ 2 ಲಕ್ಷ ರೂ ಮೌಲ್ಯದ ಅಡಿಕೆ ಕಳ್ಳತನವಾಗಿದೆ. ಪಕ್ಕದ ಮನೆಯ ಪ್ರಕಾಶ ಗೌಡ ಈ ಕಳ್ಳತನ ನಡೆಸಿರುವುದು ಗೊತ್ತಾಗಿದೆ.
ಕಿರಣ ಗೌಡ ಅವರು ತಮ್ಮ ತೋಟದಲ್ಲಿದ್ದ ಅಡಿಕೆ ಕೊಯ್ದು ಮನೆಯಲ್ಲಿ ದಾಸ್ತಾನು ಮಾಡಿದ್ದರು. ಅದನ್ನು ಮಾರಾಟಕ್ಕೆ ಕೊಂಡೊಯ್ಯುವಾಗ ಪ್ರಕಾಶ ಗೌಡ ವಿರೋಧಿಸುತ್ತಿದ್ದರು. ಪ್ರಕಾಶ ಗೌಡ ಪದೇ ಪದೇ ತೊಂದರೆ ನೀಡುತ್ತಿರುವ ಕಾರಣ ಅವರ ವಿರುದ್ಧ ದೂರು ನೀಡಿ ಪ್ರಕರಣಕ್ಕೆ ತಡೆಯಾಜ್ಞೆ ತರಲು ಕಿರಣ ಗೌಡ ನಿರ್ಧರಿಸಿದ್ದರು.
ಡಿ 17ರ ಬೆಳಗ್ಗೆ ಕಿರಣ ಗೌಡ ಕೋರ್ಟಿಗೆ ಹೋಗಿದ್ದರು. ಸಂಜೆ ಮನೆಗೆ ಮರಳಿ ಬಂದಾಗ ಅಲ್ಲಿ ಅವರು ದಾಸ್ತಾನು ಮಾಡಿದ್ದ ಅಡಿಕೆ ಚೀಲಗಳಿರಲಿಲ್ಲ. 57 ಚೀಲದಲ್ಲಿ ಅಡಿಕೆಯಿರುವ ಬಗ್ಗೆ ಕಿರಣ ಗೌಡ ಲೆಕ್ಕ ಮಾಡಿದ್ದು, ಒಂದು ಚೀಲವೂ ಕಾಣಲಿಲ್ಲ. ಈ ಬಗ್ಗೆ ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ಬುಲೇರೋ ವಾಹನದಲ್ಲಿ ಅಡಿಕೆ ಸಾಗಾಟ ನಡೆದಿರುವುದು ಗೊತ್ತಾಯಿತು.
ಪ್ರಕಾಶ ಗೌಡರೇ ಅಡಿಕೆ ಕದ್ದಿರುವ ಬಗ್ಗೆ ಖಚಿತಪಡಿಸಿಕೊಂಡ ಕಿರಣ ಗೌಡ ಪೊಲೀಸ್ ಠಾಣೆಗೆ ತೆರಳಿ ಅಡಿಕೆ ಕಳ್ಳತನದ ಬಗ್ಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.




