ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬರುವ ಕೆಎಸ್‌ಆರ್‌ಟಿಸಿ ಬಸ್ ಕಂಡೆಕ್ಟರ್ ಸಿದ್ದಪ್ಪ ಬೀರಾದರ್’ಗೆ ಕಿರವತ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಇನ್ನೊಂದು ತಿರುವು ಪಡೆದಿದೆ. `ನಾನೇನು ಮಾಡಿಲ್ಲ. ನಂದೇನೂ ತಪ್ಪಿಲ್ಲ’ ಎಂದು ಸಿದ್ದಪ್ಪ ಬೀರಾದರ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಯಲ್ಲಾಪುರ ತಾಲೂಕಿನ ಮದನೂರಿನ ಅಲ್ಕೇರಿ ಬಳಿಯ ನಿರ್ಮಲಾ ಶಿಂಧೆ (ಹೆಸರು ಬದಲಿಸಿದೆ) ಅವರು ಬಸ್ ನಿರ್ವಾಹಕ ಸಿದ್ದಪ್ಪ ಬೀರಾದರ್ ವಿರುದ್ಧ ಅನುಚಿತ ವರ್ತನೆಯ ಆರೋಪ ಮಾಡಿದ್ದರು. ಇದರೊಂದಿಗೆ ಕಿರವತ್ತಿಯಲ್ಲಿ 15ಕ್ಕೂ ಅಧಿಕ ಜನ ಕಂಡೆಕ್ಟರ್ ಮೇಲೆ ಆಕ್ರಮಣ ನಡೆಸಿದ್ದು, ಈ ವೇಳೆ ನಿರ್ಮಲಾ ಸಹ ಚಪ್ಪಲಿಯಿಂದ ಹೊಡೆದು ಅವಮಾನಿಸಿದ್ದರು. ಈ ವಿಷಯಕ್ಕೆ ಸಂಬ0ಧಿಸಿ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಸಾಕ್ಷಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
`ಶಕ್ತಿ ಯೋಜನೆ ಅಡಿ ಟಿಕೆಟ್ ಪಡೆದವರು ಯಾವ ಸ್ಥಳಕ್ಕೆ ಟಿಕೆಟ್ ಪಡೆದಿದ್ದಾರೆಯೋ ಅಲ್ಲಿಯೇ ಬಸ್ಸಿನಿಂದ ಇಳಿಯಬೇಕು. ಅದಕ್ಕೂ ಮೊದಲು ಬಸ್ಸಿನಿಂದ ಇಳಿಯಲು ಅವಕಾಶವಿಲ್ಲ. ಅದಾಗಿಯೂ ಮಹಿಳೆಯರು ಬಸ್ಸಿನಿಂದ ಇಳಿದರೆ ಬಸ್ ನಿರ್ವಾಹಕರು ಕಾನೂನಾತ್ಮಕ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಹಿನ್ನಲೆ ಕಿರವತ್ತಿಗೆ ತೆರಳಲು ಟಿಕೆಟ್ ಪಡೆದಿದ್ದ ವಿದ್ಯಾರ್ಥಿನಿಗೆ ನಡುವೆ ಬಸ್ಸಿನಿಂದ ಇಳಿಯದಂತೆ ಸೂಚಿಸಿದ್ದು, ಅದನ್ನು ವಿರೋಧಿಸಿ ಬಸ್ಸಿನಿಂದ ಹಾರಲು ಪ್ರಯತ್ನಿಸಿದಾಗ ಅದನ್ನು ತಡೆದಿದ್ದೇನೆ’ ಎಂದು ಸಿದ್ದಪ್ಪ ಬೀರಾದರ್ ಸ್ಪಷ್ಠಪಡಿಸಿದ್ದಾರೆ.
`ಆ ವಿದ್ಯಾರ್ಥಿನಿ ತನಗೆ ಮಗಳ ಸಮಾನ. ಆಕೆಯ ಜೊತೆ ಅನುಚಿತವಾಗಿ ವರ್ತಿಸಿಲ್ಲ. ಆಕೆಯ ಸುರಕ್ಷತೆಯನ್ನು ದೃಷ್ಠಿಯಲ್ಲಿರಿಸಿಕೊಂಡು ತಾನು ತನ್ನ ಕರ್ತವ್ಯ ನಿಭಾಯಿಸಿದ್ದು, ಇದರಲ್ಲಿ ನನ್ನ ತಪ್ಪಿಲ್ಲ’ ಎಂದು ಅವರು ಹೇಳಿದ್ದಾರೆ. `ಹಲವರು ಸೇರಿ ಹಲ್ಲೆ ನಡೆಸಿದ್ದರಿಂದ ಮೈ-ಕೈ ನೋವಾಗಿದೆ. ಆಸ್ಪತ್ರೆಗೆ ತೆರಳಿ ಇದೀಗ ಮರಳಿದ್ದು, ವಿಶ್ರಾಂತಿ ಪಡೆಯುತ್ತಿದ್ದೇನೆ. ಈ ಘಟನೆಯಿಂದ ಸಾಕಷ್ಟು ನೋವಾಗಿದೆ’ ಎಂದವರು ಅಳಲು ತೋಡಿಕೊಂಡರು.
ಬಸ್ ಕಂಡೆಕ್ಟರ್ ಸಿದ್ದಪ್ಪ ಬೀರಾದರ್ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..