ಹೊನ್ನಾವರ: ಡಿ 21ರಂದು ಹೊನ್ನಾವರದಲ್ಲಿ ಅರಣ್ಯವಾಸಿಗಳ ಸಮಸ್ಯೆ – ಸ್ಪಂದನೆ ಸಭೆ ನಡೆಯಲಿದೆ. ಜಿಲ್ಲಾ ಮಟ್ಟದ ಸಭೆ ಇದಾಗಿದ್ದು, ಅರಣ್ಯ ಅಧಿಕಾರಿಗಳಿಂದ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ಚರ್ಚೆ-ಪರಿಹಾರ ಕುರಿತು ಸಂವಾದ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದೆ.
`ಅರಣ್ಯವಾಸಿಗಳಿಂದ ಕಾನೂನುಬಾಹಿರ ಕೃತ್ಯ ನಡೆಯುತ್ತಿರುವ ರೀತಿಯಲ್ಲಿ ಅರಣ್ಯ ಸಿಬ್ಬಂದಿ ನಡೆದುಕೊಳ್ಳುತ್ತಿದ್ದು, ಕಾನೂನು ಅಂಶಗಳ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮನವರಿಕೆ ಮಾಡಬೇಕಿದೆ. ಅತಿಕ್ರಮಣದಾರರು ಅರಣ್ಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿದರೂ ಮುಂದುವರೆದ ದೌರ್ಜನ್ಯದ ವಿರುದ್ಧ ಹೋರಾಡಬೇಕಿದೆ. ಈ ಹಿನ್ನಲೆ ಅರಣ್ಯವಾಸಿಗಳ ಜೊತೆ ಮುಕ್ತವಾಗಿ ಮಾತನಾಡಲು ಈ ಸಭೆ ನಡೆಸಲಾಗುತ್ತಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
`ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಅರ್ಜಿ ವಿಲೇವಾರಿಯಾಗುವರೆಗೂ ಅರಣ್ಯವಾಸಿ ಸಾಗುವಳಿ ಕ್ಷೇತ್ರಕ್ಕೆ ಆತಂಕ ಮಾಡಬಾರದು ಎಂದು ಕಾನೂನು ಹೇಳುತ್ತದೆ. ಅದಾಗಿಯೂ ಅರಣ್ಯ ಸಿಬ್ಬಂದಿಯಿAದ ಆತಂಕ ಎದುರಾಗುತ್ತಿದೆ’ ಎಂದವರು ಹೇಳಿದ್ದಾರೆ. ಈ ಸಭೆಗೆ ಅರಣ್ಯ ಸಂರಕ್ಷಣಾಧಿಕಾರಿ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ ಎಂದು ರವೀಂದ್ರ ನಾಯ್ಕ ಅವರು ತಿಳಿಸಿದ್ದಾರೆ.