ಯಲ್ಲಾಪುರ: ನೂತನ ದರ್ಗಾ ಉದ್ಘಾಟನೆ, ಧಾರ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಉರುಸ್ ಆಚರಣೆ ಡಿಸೆಂಬರ್ 21ರಿಂದ 24ರವರೆಗೆ ನಡೆಯಲಿದೆ. ವಿಶೇಷ ಉಪನ್ಯಾಸ, ಅನ್ನ ಸಂತರ್ಪಣೆ ಸೇರಿ ವಿವಿಧ ಬಗೆಯ ಚಟುವಟಿಕೆಗಳಿಗೆ ಮುಸ್ಲೀಂ ಸಮುದಾಯದವರಲ್ಲಿ ತಯಾರಿ ಜೋರಾಗಿದೆ.
ಶುಕ್ರವಾರ ಈ ಬಗ್ಗೆ ಉರುಸ್ ಕಮಿಟಿಯ ಅಬ್ದುಲ್ ರೆಹೆಮಾನ್ ಸೈಯ್ಯದ್ ಮಾಹಿತಿ ನೀಡಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. `ಡಿ 22ರಂದು ಸಂಜೆ 5 ಗಂಟೆಗೆ ಅಕ್ಬರ ಗಲ್ಲಿಯಿಂದ ಮೆರವಣಿಗೆ ಶುರುವಾಗಲಿದೆ. ಪಟ್ಟಣದ ವಿವಿಧ ಕಡೆ ಸಂಚರಿಸಿದ ನಂತರ ಮೆರವಣಿಗೆ ದರ್ಗಾಗೆ ಬರಲಿದೆ. ನಂತರ ಅಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಈ ದಿನ ಕೇರಳ ಕಾಸರಗೋಡ ನೂರ್ ಎ ಇಸ್ಲಾಂ ಅವರಿಂದ ಬುರ್ದಾ ಶರೀಫ್, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.
ಡಿ 23ರಂದು ಸಂಜೆ 7ಕ್ಕೆ ಮೆರವಣಿಗೆ, ಸರ್ವಧರ್ಮ ಅನ್ನ ಸಂತಪರ್ಣೆ ನಡೆಯಲಿದೆ. ಉತ್ತರ ಪ್ರದೇಶದ ಸಮದಾನಿಮಿಯಾ ಖಚೋಚಾ ಶರೀಫ ಹಾಗೂ ಬಿಜಾಪುರದ ಹನೀಪ್ ರಜಾ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಡಿ 24ರಂದು ರಾತ್ರಿ ಮುಂಬೈನ ಅಜೀಂ ನಾಜಾ ಹಾಗೂ ಸರ್ಫರಾಜ ಸಾಬರಿ ಖವಾಲಿ ನಡೆಸಿಕೊಡಲಿದ್ದಾರೆ. ಖವಾಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು. ಸಮಿತಿ ಪ್ರಮುಖರಾದ ಅಬ್ದುಲ್ ಕರಿಂ ಉಮರಶೇಖ್, ಟಿ ಪಿ ಸುಲೇಮಾನ್, ಅಬ್ದುಲ್ ಹಮೀದ್ ಮುಲ್ಲಾ, ಖಾಜಾ ಮೈನುದ್ದೀನ್ ಅಕ್ತಾರ, ನಿಜಾಮುದ್ದಿನ್ ಟಿಪಿ, ಶಾಬಾಸ್ ಸೈಯ್ಯದ್ ಇದ್ದರು.