ಸಿದ್ದಾಪುರ: ಕಳೆದ ದೀಪಾವಳಿ ವೇಳೆ ಬೇರೆಯವರ ಕಾರಿನ ಮೇಲೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ. ಈ ಹಿನ್ನಲೆ ರಾಜೇಶ ನಾಯ್ಕ ಹಾಗೂ ಅಶೋಕ ನಾಯ್ಕ ಎಂಬಾತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
ಸಿದ್ದಾಪುರ ಹಾರ್ಸಿಕಟ್ಟಾ ಮೂಲದ ಕೆರಿಯಾ ನಾಯ್ಕ ಅವರು ಪ್ರಸ್ತುತ ಶಿರಸಿಯ ಚಿಪಗಿಯ ನ್ಯೂ ಕೆಎಚ್‌ಬಿ ಕಾಲೋನಿಯಲ್ಲಿ ವಾಸವಾಗಿದ್ದಾರೆ. 83 ವರ್ಷದ ಅವರು ದೀಪಾವಳಿ ಹಬ್ಬದ ಅಂಗವಾಗಿ ಫೆ 2ರಂದು ತಮ್ಮ ಮೂಲ ಮನೆಗೆ ತೆರಳಿದ್ದರು. ರಾತ್ರಿ 11.45ಕ್ಕೆ ಅವರು ಹಬ್ಬ ಆಚರಿಸುತ್ತಿದ್ದಾಗ ಅದೇ ಊರಿನ ರಾಜೇಶ ನಾಯ್ಕ ಹಾಗೂ ಅಶೋಕ ನಾಯ್ಕ ಸೇರಿ ಕೆರಿಯಾ ನಾಯ್ಕ ಅವರ ಮನೆ ಕಡೆ ಪಟಾಕಿ ಹಾರಿಸಿದ್ದರು.
ಈ ಬಗ್ಗೆ ಪ್ರಶ್ನಿಸಿದಾಗ ಕೆರಿಯಾ ನಾಯ್ಕ ಅವರ ಮನೆ ಕಪೌಂಡ್ ಮೇಲೆ ಪಟಾಕಿ ಅಂಟಿಸಿದ್ದರು. ಅದಾದ ನಂತರ ಮನೆಯೊಳಗಿದ್ದ ಕಾರಿನ ಮೇಲೆಯೂ ಪಟಾಕಿಗಳನ್ನು ಹಚ್ಚಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರು ಸೇರಿ ಕೆಟ್ಟದಾಗಿ ನಿಂದಿಸಿದ ಬಗ್ಗೆ ಮರುದಿನ ಕೆರಿಯಾ ನಾಯ್ಕ ಪೊಲೀಸ್ ದೂರು ನೀಡಿದ್ದರು. ಆ ವೇಳೆ ಎದುರುದಾರರಿಗೆ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೆರಿಯಾ ನಾಯ್ಕ ಪಟ್ಟು ಹಿಡಿದಿದ್ದರು.
ಇದೀಗ ನ್ಯಾಯಾಲಯದ ಮೊರೆ ಹೋದ ಕೆರಿಯಾ ನಾಯ್ಕ ಅವರು ತಮ್ಮನ್ನು ನಿಂದಿಸಿ ಕಾರು ಹಾಗೂ ಕಪೌಂಡ್ ಮೇಲೆ ಪಟಾಕಿ ಹೊಡೆದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.



