ಕಾರವಾರ: ಕೇಂದ್ರ ಸಚಿವ ಅಮಿತ್ ಶಾ ಹಾಗೂ ವಿಪ ಸದಸ್ಯ ಸಿ ಟಿ ರವಿ ಅವರ ನಡವಳಿಕೆಯ ಬಗ್ಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಕಿಡಿಕಾರಿದ್ದಾರೆ. ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವ ವರ್ತನೆಯನ್ನು ಅವರು ಖಂಡಿಸಿದ್ದಾರೆ.
`ಸoವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ತುಚ್ಛವಾಗಿ ಮಾತನಾಡಿದ್ದಾರೆ. ಸಿ ಟಿ ರವಿ ಸಹ ಸದನದಲ್ಲಿಯೇ ಮಹಿಳಾ ಸಚಿವರನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಇಂಥವರ ನಡೆ ಬಿಜೆಪಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ’ ಎಂದು ಮಾಧವ ನಾಯಕ ಹೇಳಿದ್ದಾರೆ. `ಬಿ ಆರ್ ಅಂಬೇಡ್ಕರ್ ಅವರನ್ನು ಅನೇಕರು ಆರಾಧಿಸುತ್ತಾರೆ. ಹಿಂದುಳಿದ ಸಮುದಾಯದಲ್ಲಿ ಹುಟ್ಟಿ ಸಾಮಾಜಿಕ ಸಮಸ್ಯೆಗಳ ನಡುವೆ ಬೆಳೆದು ಸಂವಿಧಾನ ಬರೆದ ಅವರ ಬಗ್ಗೆ ಕನಿಷ್ಟ ಭಾವನೆಯಲ್ಲಿ ಮಾತನಾಡಿದ್ದು ಸರಿಯಲ್ಲ. ಅಂಬೇಡ್ಕರ್ ಅವರು ಕೊಡುಗೆಯಾಗಿ ನೀಡಿದ ಸಂವಿಧಾನದ ಆಧಾರದಲ್ಲಿಯೇ ಅಮಿತ್ ಶಾ ಅಧಿಕಾರಕ್ಕೆ ಬಂದಿದ್ದು, ಸಂಸತ್ತಿನಲ್ಲಿ ಮಾತನಾಡಲು ಸಿಕ್ಕಿರುವುದಕ್ಕೆ ಸಹ ಅಂಬೇಡ್ಕರ್ ಅವರು ಕಾರಣ’ ಎಂದು ಅಮಿತ್ ಶಾ ಮರೆಯಬಾರದು’ ಎಂದು ಮಾಧವ ನಾಯಕ ಹೇಳಿದ್ದಾರೆ.
`ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ. ಮಹಿಳೆಯರನ್ನು ನಿಂದಿಸಿ ಅವಮಾನ ಮಾಡಿರುವುದು ಖಂಡನೀಯ. ಹೆಬ್ಬಾಳ್ಳಕರ್ ಅವರು ತಮಗೆವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು, ಇದನ್ನು ಸಹಿಸದೇ ನಿಂದಿಸಲಾಗಿದೆ. ಇದು ಎಲ್ಲಾ ಮಹಿಳೆಯರಿಗೂ ಮಾಡಿದ ಅಪಮಾನ’ ಎಂದು ಮಾಧವ ನಾಯಕ ಅಭಿಪ್ರಾಯಪಟ್ಟಿದ್ದಾರೆ. `ಬಿಜೆಪಿಯವರು ಪದೇ ಪದೇ ಸಭ್ಯತೆ, ಸಂಸ್ಕೃತಿಯ ಬಗ್ಗೆ ಹೇಳುತ್ತಾರೆ. ಆದರೆ, ಅವರು ಅದನ್ನು ಎಂದಿಗೂ ಆಚರಿಸುವುದಿಲ್ಲ ಎನ್ನುವುದಕ್ಕೆ ಈ ಎರಡು ವಿದ್ಯಮಾನಗಳು ಸಾಕ್ಷಿ’ ಎಂದಿರುವ ಮಾಧವ ನಾಯಕ, ಅಮಿತ್ ಶಾ ಹಾಗೂ ಸಿ ಟಿ ರವಿ ಅವರ ನಿಲುವು ಖಂಡಿಸಿದ್ದಾರೆ.