ಕಾರವಾರ: `ರಾಜಕೀಯ ದುರುದ್ದೇಶದಿಂದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಬಂಧಿಸಲಾಗಿದ್ದು, ಸಿ ಟಿ ರವಿ ಅವರ ಮೇಲೆ ಹಲ್ಲೆ ಪ್ರಯತ್ನ ನಡೆದಿದೆ. ರಾಜ್ಯ ಸರ್ಕಾರದ ಗುಂಡಾ ವರ್ತನೆಗೆ ಇದೊಂದು ಉದಾಹರಣೆ’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದ್ದಾರೆ. ಸರ್ಕಾರದ ನಡೆಯನ್ನು ಅವರು ಖಂಡಿಸಿದ್ದಾರೆ. ಜೊತೆಗೆ `ಸಿ ಟಿ ರವಿ ಅವರ ಬೆಂಬಲಕ್ಕೆ ನಾವಿದ್ದೇವೆ’ ಎಂದು ಹೇಳಿದ್ದಾರೆ.
`ರಾಜ್ಯ ಸರಕಾರ ಪೊಲೀಸರ ಮೇಲೆ ಒತ್ತಡ ಹೇರಿ ರವಿ ಅವರನ್ನು ಬಂಧಿಸಿದೆ. ಪೊಲೀಸ್ ಕಸ್ಟಡಿಯಲ್ಲಿರುವಾಗ ಸಿ ಟಿ ರವಿ ಅವರ ತಲೆಗೆ ಗಾಯವಾಗಿದ್ದು, ಅದಕ್ಕೆ ಚಿಕಿತ್ಸೆ ಕೊಡಿಸಲು ಮೂರು ತಾಸು ತಡವಾಗಿದೆ. ಪೊಲೀಸ್ ವಾಹನದಲ್ಲಿ ಸಿ ಟಿ ರವಿ ಅವರನ್ನು ಕೂರಿಸಿಕೊಂಡು ಸುತ್ತಾಡಿಸಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನ’ ಎಂದು ಗಣಪತಿ ಉಳ್ವೇಕರ್ ಹೇಳಿದ್ದಾರೆ.
ಅಶ್ಲೀಲ ಪದ ಸಮರ್ಥನೆ ಇದಲ್ಲ!
`ಮಹಿಳಾ ಸಚಿವರ ಬಗ್ಗೆ ಸಿ ಟಿ ರವಿ ಅವರು ಅವರು ಅಶ್ಲೀಲ ಪದ ಬಳಕೆ ಮಾಡಿದ್ದರೆ ಅದಕ್ಕೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಬದಲಾಗಿ ಶಾಸಕರ ಜೊತೆ ಸರ್ಕಾರ ಈ ರೀತಿ ವರ್ತಿಸುವುದು ಸರಿಯಲ್ಲ. ಸಚಿವೆಯ ಬೆಂಬಲಿಗರ ಗುಂಡಾಗಿರಿಯೂ ಅತಿಯಾಗಿದೆ. ಸಭಾಪತಿಗಳನ್ನು ನಿಂದಿಸುವ ಮಟ್ಟಿಗೆ ತೆರಳಿರುವುದು ಆಘಾತಕಾರಿ’ ಎಂದು ಗಣಪತಿ ಉಳ್ವೇಕರ್ ಅಭಿಪ್ರಾಯಪಟ್ಟಿದ್ದಾರೆ.



