ಕುಮಟಾ: ಕರಾವಳಿ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಮೊದಲಿನಿಂದಲು ಸಾಲು ಸಾಲು ಗ್ಯಾಸ್ ಟ್ಯಾಂಕರ್ ಜೊತೆ ಪೆಟ್ರೋಲ್-ಡಿಸೇಲ್ ಮೊದಲಾದ ಇಂಧನ ತುಂಬಿದ ನಿಲ್ಲುತ್ತಿವೆ. ಈ ವಾಹನಗಳ ಅಂಚಿನಲ್ಲಿ ಗ್ಯಾಸ್ ಸ್ಟೋವ್’ಗೆ ಬೆಂಕಿ ಹಚ್ಚಿ ಕೆಲವರು ಅಡುಗೆ ತಯಾರಿಸುತ್ತಿದ್ದು, ಮೊನ್ನೆ ರಾತ್ರಿ ಗ್ಯಾಸ್ ಸ್ಟೋವ್ ಸ್ಪೋಟವಾಗಿ ಅಪಾಯದ ಮುನ್ಸೂಚನೆ ಸಿಕ್ಕರೂ ಸುರಕ್ಷತಾ ಕ್ರಮದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.
2015ರ ಸೆ 1ರಂದು ಮಂಗಳೂರಿನಿoದ ಅಂಕೋಲಾ ಕಡೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಬರ್ಗಿ ಘಟ್ಟದ ತಿರುವಿನಲ್ಲಿ ಪಲ್ಟಿಯಾಗಿತ್ತು. ಟ್ಯಾಂಕಿನೊಳಗಿರುವ ಅನಿಲಕ್ಕೆ ವಾಸನೆ ಇರದ ಕಾರಣ ಅನಿಲ ಸೋರಿಕೆಯಾದರೂ ಆ ವಿಷಯ ಊರಿನವರಿಗೆ ಅರಿವಾಗಿರಲಿಲ್ಲ. ಬೆಳಗ್ಗೆ ಎದ ಚಹ ಮಾಡುವುದಕ್ಕಾಗಿ ಗ್ಯಾಸ್ ಸ್ಟೋವ್ ಹಚ್ಚಿದ್ದ ಬರ್ಗಿಯ ಜಯಶ್ರೀ ಪಟಗಾರ ಅವರ ಮನೆ ಹೊತ್ತಿ ಉರಿದು ಆ ಕುಟುಂಬದ ಸದಸ್ಯರೆಲ್ಲರೂ ನಿದ್ದೆಯಲ್ಲಿಯೇ ಜೀವ ಕಳೆದುಕೊಂಡಿದ್ದರು. ಕೊನೆಗೆ 13 ಜನ ಸಾವನಪ್ಪಿದ ಲೆಕ್ಕ ಸಿಕ್ಕಿದ್ದು, ಜಾನುವಾರುಗಳ ಸಾವಿನ ವರದಿ ಹೊರಬರಲಿಲ್ಲ. ಊರಿನ ಇತರೆ ಮನೆಗಳು ಸಹ ಬೆಂಕಿಯ ಜ್ವಾಲೆಯಿಂದ ಬೆಂದಿದ್ದವು.
ಅದಾದ ನಂತರ ಕೆಲ ವರ್ಷಗಳವರೆಗೂ ಅತ್ಯಂತ ಕಟ್ಟುನಿಟ್ಟಾದ ನಿಯಮ ಪಾಲಿಸಲಾಯಿತು. ಹೆದ್ದಾರಿಯಲ್ಲಿ ಸಂಚರಿಸುವ ಗ್ಯಾಸ್ ಟ್ಯಾಂಕರ್ ಬಗ್ಗೆ ಹೆಚ್ಚಿನ ನಿಗಾವಹಿಸಲಾಯಿತು. ಬರ್ಗಿಯಲ್ಲಿ ನಡೆದ ಅನಿಲ ದುರಂತವನ್ನು ಜನ ಮರೆತ ನಂತರ ಗ್ಯಾಸ್ ಟ್ಯಾಂಕರ್ ಸುರಕ್ಷತಾ ನಿಯಮಗಳು ದೂರವಾದವು. ಇದೀಗ ಮತ್ತೆ ಅಂಥಹುದೇ ನಿರ್ಲಕ್ಷ್ಯ ಮುಂದುವರೆದಿದ್ದು, ಹೆದ್ದಾರಿ ಅಂಚಿನಲ್ಲಿ ಗ್ಯಾಸ್ ಟ್ಯಾಂಕರ್ ನಿಲ್ಲಿಸಿ ಅದರ ಅಡಿಭಾಗದಲ್ಲಿಯೇ ಬೆಂಕಿ ಹಚ್ಚಿ ಅಡುಗೆ ಮಾಡುವವರಿದ್ದರೂ ಅದನ್ನು ತಡೆಯುವವರಿಲ್ಲ!
ಶನಿವಾರ ರಾತ್ರಿ ಸುವರ್ಣಗದ್ದೆ ಬಳಿ ಅಡುಗೆ ಮಾಡುವ ಸಣ್ಣ ಗ್ಯಾಸ್ ಸ್ಟೋವ್ ಸ್ಪೋಟವಾಗಿದೆ. ಸಮೀಪದಲ್ಲಿಯೇ ಗ್ಯಾಸ್ ತುಂಬಿದ ಟ್ಯಾಂಕರ್ ನಿಲ್ಲಿಸಲಾಗಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಬಹುದೊಡ್ಡ ಅಪಾಯ ತಪ್ಪಿದೆ. `ಜನ ವಸತಿ ಪ್ರದೇಶದ ಅಂಚಿನಲ್ಲಿ ಗ್ಯಾಸ್ ಟ್ಯಾಂಕರ್ ನಿಲುಗಡೆಗೆ ಅವಕಾಶ ಕೊಡಬಾರದು’ ಎಂದು ಜನ ಆಗ್ರಹಿಸುತ್ತಲೇ ಇದ್ದರೂ ಅದನ್ನು ಹೆದ್ದಾರಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿಲ್ಲ. ಅಪಾಯದ ಬಗ್ಗೆ ಅರಿವಿದ್ದರೂ ಹೆದ್ದಾರಿ ನಿರ್ಮಾಣ ಹೊಣೆ ಹೊತ್ತ ಐ ಆರ್ ಬಿ ಕಂಪನಿ ಮೌನವಾಗಿದೆ.