ಯಲ್ಲಾಪುರ: ಹಾಲು ಉತ್ಪಾದನೆ ಮೂಲಕ ಈ ವರ್ಷ 1.60 ಲಕ್ಷ ರೂ ಆದಾಯ ಪಡೆದಿರುವ ಸವಣಗೇರಿ ಹಾಲು ಒಕ್ಕೂಟ ಸರ್ಕಾರಿ ಶಾಲೆಗೆ ಹಣಕಾಸಿನ ನೆರವು ನೀಡಿದೆ. ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಿದ ಸವಣಗೇರಿ ಸರ್ಕಾರಿ ಶಾಲೆಗೆ ಹಾಲು ಒಕ್ಕೂಟದಿಂದ 5 ಸಾವಿರ ರೂ ದೇಣಿಗೆ ನೀಡಲಾಗಿದೆ. ಹಣವನ್ನು ವಿದ್ಯಾರ್ಥಿಗಳ ಇಂಟರ್‌ನೆಟ್ ಸೇವೆಗೆ ಬಳಸಿಕೊಳ್ಳುವಂತೆ ಹಾಲು ಒಕ್ಕೂಟ ಸಂಘ ಸೂಚಿಸಿದೆ.
ಕಳೆದ 15 ವರ್ಷಗಳಿಂದ ಸವಣಗೇರಿಯ ಹಾಲು ಒಕ್ಕೂಟ ಹಾಲು ಮಾರಾಟದ ಜೊತೆ ಹೈನುಗಾರಿಕೆಗೆ ಉತ್ತೇಜನ ನೀಡುತ್ತಿದೆ. 10 ಹೈನುಗಾರರಿಂದ ಶುರುವಾದ ಈ ಒಕ್ಕೂಟಕ್ಕೆ ಪ್ರಸ್ತುತ 40ಕ್ಕೂ ಅಧಿಕ ರೈತರು ಹಾಲು ನೀಡುತ್ತಿದ್ದಾರೆ. ಹಾಲು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ಪೌಷ್ಠಿಕಾಂಶ ಮಾರಾಟದಿಂದ ಈ ವರ್ಷ ಸಂಘ 1.60 ಲಕ್ಷ ರೂ ಲಾಭಗಳಿಸಿದ್ದು, ಅದೇ ಹಣದಲ್ಲಿ 5 ಸಾವಿರ ರೂ ಮೊತ್ತವನ್ನು ಮಕ್ಕಳ ಕಲಿಕೆಗೆ ವಿನಿಯೋಗಿಸಿದೆ.
ಸವಣಗೇರಿ ಶಾಲೆಯಲ್ಲಿ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿ ತಿಂಗಳು ಇಂಟರ್‌ನೆಟ್ ಹಣ ಪಾವತಿಗಾಗಿ ಈ ಹಣವನ್ನು ನೀಡಲಾಗಿದೆ. ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ ಹೆಗಡೆ ಹಾಗೂ ಕಾರ್ಯದರ್ಶಿ ಹರ್ಷಿತ ಗೊಂದಲಿ ಅವರು ಶಾಲಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಅವರಿಗೆ ಈ ಹಣ ಹಸ್ತಾಂತರಿಸಿದರು. ಮುಖ್ಯ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ, ಪ್ರಮುಖರಾದ ನಾಗಭೂಷಣ್ ಹೆಗಡೆ, ರವಿ ನಾಯ್ಕ ಇತರರು ಇದ್ದರು.