ಕುಮಟಾ: ಬೆಳಗ್ಗೆ ಬೇಗ ಎದ್ದು ಹೂವುಗಳನ್ನು ಕೊಯ್ದು ಅವನ್ನು ಪೋಣಿಸಿ ಪಟ್ಟಣಕ್ಕೆ ತಂದು ಮಾರುವ ಮಹಿಳೆಯರನ್ನು ಗುರುತಿಸಿ ಯುವಾ ಯುವಾ ಬ್ರಿಗೇಡ್ ಸನ್ಮಾನಿಸಿದೆ.
ಸನ್ಮಾನಿತರಲ್ಲಿ ಅನೇಕ ಮಹಿಳೆಯರು ಮನೆ ಅಂಗಳದಲ್ಲಿ ಸ್ವತ: ಹೂವುಗಳನ್ನು ಬೆಳೆದು ಗಿಡಗಳ ಆರೈಕೆ ಮಾಡುತ್ತಾರೆ. ಅಲ್ಲಿ ಬೆಳೆದ ಹೂವುಗಳನ್ನು ಪೋಣಿಸಿ ಮಾರುಕಟ್ಟೆಗೆ ತರುತ್ತಾರೆ. ಅವರಿಗೆ ಅದೇ ಜೀವನದ ಆದಾಯ. ವಿವಿಧ ದೇವಾಲಯಗಳ ಎದುರು ಹಾಗೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೂವು ಮಾರಾಟ ಮಾಡಿ ಭಕ್ತರ ಮೂಲಕ ಅವರು ತಮ್ಮ ಶ್ರಮವನ್ನು ದೇವರಿಗೆ ಅರ್ಪಿಸುತ್ತಾರೆ. ಇಂಥ 39 ಮಹಿಳೆಯರನ್ನು ಯುವಾ ಬ್ರಿಗೇಡ್ ಕಾರ್ಯಕರ್ತರು ಗುರುತಿಸಿ ಗೌರವಿಸಿದರು.
ಬೆಳಗ್ಗೆ 6 ಗಂಟೆಯಿoದಲೇ ಮಾರುಕಟ್ಟೆಯಲ್ಲಿ ಹೂ ಮಾರುವ ಮಹಿಳೆಯರಿದ್ದಾರೆ. ದೇವಾಲಯಗಳಲ್ಲಿ ಮಹಾಪೂಜೆ ಮುಗಿಯುವವರೆಗೂ ಬಿಸಿಲಿನಲ್ಲಿ ನಿಂತು ಹೂ ಮಾರಿ ಮನೆ ಸೇರುವವರು ಹೆಚ್ಚಿದ್ದಾರೆ. ಮಾಸ್ತಿಕಟ್ಟೆ ದೇವಾಲಯ, ಮೂರುಕಟ್ಟೆ ವೆಂಕಟ್ರಮಣ ದೇಗು, ಶಾಂತೇರಿ ಕಾಮಾಕ್ಷಿ ದೇವಾಲಯ, ಕಾವೂರು ಕಾಮಾಕ್ಷಿ ದೇವಸ್ಥಾನಗಳ ಮೂಲಕ ಈ ಮಹಿಳೆಯರು ಪೋಣಿಸಿದ ಹೂವಿನ ಮಾಲೆ ದೇವರಿಗೆ ಸೇರುತ್ತದೆ. ಹೆಚ್ಚಿನ ಮಹಿಳೆಯರು ಕುಮಟಾ ರಥಬೀದಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಿತ್ಯ ಹೂವು ಮಾರಿ ಬದುಕು ಕಟ್ಟಿಕೊಂಡಿದ್ದಾರೆ.
ಯುವಾ ಬ್ರಿಗೇಡ್ ತಂಡದವರು ಪ್ರಸ್ತುತ `ಅಮ್ಮ ನಮನ’ ಎಂಬ ಕಾರ್ಯಕ್ರಮದ ಅಡಿ ಅವರ ಸೇವೆ ಗುರುತಿಸಿದರು. ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ಭಾನುವಾರ ದೇವಾಲಯ ಸಮಿತಿಯ ಉಪಾಧ್ಯಕ್ಷ ಮೂಡ್ಲಗೀರಿ ನಾಯಕ ಹಾಗೂ ತಾಲೂಕಿನ ಆರೋಗ್ಯಾಧಿಕಾರಿ ಆಜ್ಞಾ ನಾಯಕ ಸೇರಿ ಮಹಿಳೆಯರಿಗೆ ಸನ್ಮಾನಿಸಿದರು. ಈ ವೇಳೆ ವಿಜಯ ನಾಯಕ ಬರ್ಗಿ ಅವರು ಸನ್ಮಾನಿತರಿಗೆ ಸೀರೆ ವಿತರಿಸಿ ಗೌರವಿಸಿದರು. `ದೇವರು ಹಾಗೂ ಮನುಷ್ಯನ ನಡುವಿನ ಸೇತುವೆಯಾಗಿ ಹೂವು ಮಾರುವವರು ಕೆಲಸ ಮಾಡುತ್ತಿದ್ದಾರೆ’ ಎಂದು ಅಲ್ಲಿದ್ದವರು ಅಭಿಪ್ರಾಯಪಟ್ಟರು.
ಸನ್ಮಾನಿತರಿಗೆ ನೆನಪಿನ ಕಾಣಿಕೆಯಾಗಿ ಹೂವಿನ ಗಿಡಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಪುರಸಭೆಯ ಸಮುದಾಯ ಸಂಘಟಕಿ ಮೀನಾಕ್ಷಿ ಆಚಾರಿ ಇದ್ದರು. ಯುವಾ ಬ್ರಿಗೇಡ್ ತಂಡದ ಸಚೀನ್ ಭಂಡಾರಿ, ಅಣ್ಣಪ್ಪ ನಾಯ್ಕ, ಗೌರೀಶ ನಾಯ್ಕ, ರವೀಶ ನಾಯ್ಕ, ಚಿಂದoಬರ ಅಂಬಿಗ, ಪ್ರಕಾಶ ನಾಯ್ಕ, ಲಕ್ಷ್ಮೀಕಾಂತ ಮುಕ್ರಿ, ಸಂದೀಪ ಮಡಿವಾಳ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಜ್ಯೋತಿ ನಾಯ್ಕ, ಗಾಯತ್ರಿ ಮಡಿವಾಳ ಕಾರ್ಯಕ್ರಮ ಸಂಘಟಿಸಿದ್ದರು.