ಕಾರವಾರ: ಆಯುಷ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ ಸಂಗಮೇಶ ಅವರ ಮೇಲೆ ಡಿ 11ರಂದು ಹಲ್ಲೆ ನಡೆದಿದ್ದು, ಆ ದಿನ ವೈದ್ಯರಿಗೆ ಕಪಾಳ ಮೋಕ್ಷ ಮಾಡಿದ ವಿನೋದ ಮಾಳ್ಸೆಕರ್ ಇದೀಗ ಹೊಸ ಕಥೆ ಬಿಚ್ಚಿಟ್ಟಿದ್ದಾರೆ. ರೋಗಿಯಿಂದ ಹಲ್ಲೆ ನಡೆದ ಬಗ್ಗೆ ವೈದ್ಯರು ದೂರು ನೀಡಿದ್ದು, `ವೈದ್ಯರೇ ತನಗೆ ಹೊಡೆದಿದ್ದಾರೆ’ ಎಂದು ಇದೀಗ ವಿನೋದ ಮಾಳ್ಸೆಕರ್ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಏಳೆಂಟು ವರ್ಷದಿಂದ ಪೈಲ್ಸ ಸಮಸ್ಯೆಯಿಂದ ಬಳಲುತ್ತಿದ್ದ ವಿನೋದ ಮಾಳ್ಸೇಕರ್ ಆ ದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಡಾ ಸಂಗಮೇಶ್ ಅವರು ಬರೆದುಕೊಟ್ಟ ಔಷಧಿಯನ್ನು ಅವರು ಪಡೆದಿದ್ದರು. ಔಷಧಿ ಪಡೆಯುವ ವಿಧಾನದ ಬಗ್ಗೆ ವಿಚಾರಿಸಲು ಹೋದಾಗ ಡಾ ಸಂಗಮೇಶ ಪ್ರವಚನ ಶುರು ಮಾಡಿದರು. `ಪ್ರವಚನ ಕೇಳಲು ಪುರಸೋತ್ತಿಲ್ಲ. ಪ್ರವಚನ ಕೇಳುವುದಾದರೆ ನಾನು ಮಠಕ್ಕೆ ಹೋಗುತ್ತಿದ್ದೆ’ ಎಂದು ವಿನೋದ ಮಾಳ್ಸೇಕರ್ ಹೇಳಿದರು. `ಇದರಿಂದ ಸಿಟ್ಟಾದ ಡಾ ಸಂಗಮೇಶ ಪರಂಡಿ ತನನ್ನು ದೂಡಿ, ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ’ ಎಂಬುದು ವಿನೋದ ಮಾಳ್ಸೇಕರ್ ಅವರ ಆರೋಪ.
`ವಿನೋದ ಮಾಳ್ಸೆಕರ್ ಅವರು ಫೈಲ್ಸ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಯುಷ್ ಆಸ್ಪತ್ರೆಗೆ ಬಂದಿದ್ದರು. ಫಾರ್ಮಸಿಯಿಂದ ಔಷಧ ಡಬ್ಬಿ ಹಿಡಿದು ಬಂದ ವಿನೋದ ಮಾಳ್ಸೆಕರ್ ಮೊದಲು ಕೆಟ್ಟ ಶಬ್ದದಿಂದ ನಿಂದಿಸಿದರು. ಅದಾದ ನಂತರ `ಸೀಲ್ ಆಗಿರುವ ಡಬ್ಬ ಕೊಡು’ ಎಂದು ಕೂಗಾಡಿ ಕೆನ್ನೆ ಮೇಲೆ ಬಾರಿಸಿದರು’ ಎಂಬುದು ಡಾ ಸಂಗಮೇಶ ಅವರ ದೂರು.
ಇದನ್ನು ಓದಿ: ಆಯುಷ್ ವೈದ್ಯನಿಗೆ ಕಪಾಳ ಮೋಕ್ಷ
`ಆಸ್ಪತ್ರೆಯಲ್ಲಿನ ಮಾತ್ರೆಗಳು ಹಾಳಾಗಿವೆ. ಕೆಲವರು ಅದನ್ನು ಸುಟ್ಟು ನಾಶ ಮಾಡಿದ್ದಾರೆ’ ಎಂದು ಡಾ ಸಂಗಮೇಶ್ ಮೇಲಧಿಕಾರಿಗಳಿಗೆ ದೂರಿದ್ದರು. `ಡಾ ಸಂಗಮೇಶ್ ಅವರೇ ಔಷಧಿ ಕದ್ದು, ಅದನ್ನು ಸುಟ್ಟಿದ್ದಾರೆ’ ಎಂದು ಆಸ್ಪತ್ರೆ ನೌಕರರು ಆರೋಪಿಸಿದ್ದರು. ಈ ಎರಡು ಕಡೆಯಿಂದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆ ದಿನ ನಡೆದಿದ್ದೇನು? ಎನ್ನುವುದರ ಬಗ್ಗೆ ತನಿಖೆ ಶುರು ಮಾಡಿದ್ದಾರೆ.