ಹೊನ್ನಾವರ: ಮಕ್ಕಳ ಆಟಿಕೆ ಸಾಮಗ್ರಿ ಹೊತ್ತು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಪರಿಣಾಮ ಆ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊತೆಗೆ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊನ್ನಾವರದ ಗೇರುಸೊಪ್ಪ ಬಳಿಯ ಸುಳಿಮುರ್ಖಿ ತಿರುವಿನಲ್ಲಿ ಭಾನುವಾರ ರಾತ್ರಿ ಲಾರಿ ಅಪಘಾತ ನಡೆದಿದೆ. ಕೇರಳದಿಂದ ಹೊನ್ನಾವರದ ಕಡೆ ಈ ಲಾರಿ ಬರುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ಅಪಘಾತಕ್ಕೆ ಒಳಗಾಯಿತು. ಲಾರಿ ಒಳಗಿದ್ದ ಇಬ್ಬರು ನಿದ್ರೆಯ ಮಂಪರಿನಲ್ಲಿಯೇ ಸಾವನಪ್ಪಿದರು. ಸಾವನಪ್ಪಿದ ಇಬ್ಬರು ಬಿಹಾರ ರಾಜ್ಯದವರಾಗಿದ್ದಾರೆ.
ಇನ್ನೂ ಈ ಅಪಘಾತದಲ್ಲಿ ನಳಂದದ ಸಜ್ಜನಕುಮಾರ, ಗಯಾ ಮೂಲದ ಗಣವ್ರಿ, ಪಟ್ನಾದ ಪಪ್ಪುಕುಮಾರ ಗಾಯಗೊಂಡಿದ್ದಾರೆ. ಅವರನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕಾನೂನು ಕ್ರಮ ಜರುಗಿಸಿದ್ದಾರೆ.