ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವೂ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ಸೂಚನೆ ನೀಡಿದೆ. 15 ದಿನಗಳ ಒಳಗೆ ಪತ್ರಕ್ಕೆ ಹಿಂಬರಹ ನೀಡುವುದರ ಜೊತೆ ಹೋರಾಟಗಾರ ಅನಂತಮೂರ್ತಿ ಹೆಗಡೆಯವರಿಗೂ ಪ್ರತಿ ರವಾನಿಸುವಂತೆ ಸೂಚಿಸಿದೆ.
2023ರ ನವೆಂಬರ್ ಅವಧಿಯಲ್ಲಿ ಅನಂತಮೂರ್ತಿ ಹೆಗಡೆ ಅವರು ಮೆಡಿಕಲ್ ಕಾಲೇಜು ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಏಳು ದಿನಗಳ ಪಾದಯಾತ್ರೆ ಮಾಡಿದ್ದರು. ಶಿರಸಿಯಿಂದ ಕಾರವಾರದವರೆಗೆ ನಡೆದ ಅವರು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಹಾಗೂ ಮೆಡಿಕಲ್ ಕಾಲೇಜು ಅನಿವಾರ್ಯತೆ ಬಗ್ಗೆ ವಿವರಿಸಿದ್ದರು.
`ಬಿಜೆಪಿ ಸರ್ಕಾರ ಕುಮಟಾದಲ್ಲಿ ಜಾಗ ಗುರುತಿಸಿದ್ದರೂ ನಂತರ ಆಸ್ಪತ್ರೆ ನಿರ್ಮಾಣ ಆಗದ ಬಗ್ಗೆ ಅನಂತಮೂರ್ತಿ ಹೆಗಡೆ ಅವರು ಶಿರಸಿಯಿಂದ ಕಾರವಾರದವರೆಗಿನ ಪಾದಯಾತ್ರೆಯಲ್ಲಿ ಆಕ್ರೋಶ ಹೊರಹಾಕಿದ್ದರು. ನಂತರ ಅನಂತಮೂರ್ತಿ ಹೆಗಡೆ ಚ್ಯಾರಿಟೆಬಲ್ ಟ್ರಸ್ಟಿನ ಮೂಲಕ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಇದೀಗ ಅದಕ್ಕೆ ಸರ್ಕಾರ ಅದಕ್ಕೆ ಸ್ಪಂದಿಸಿದೆ.
ಆಸ್ಪತ್ರೆ ಮಾತ್ರ ಸಾಲುವುದಿಲ್ಲ!
`ಆಸ್ಪತ್ರೆ ಮಾತ್ರ ನಿರ್ಮಿಸಿದರೆ ಸಾಲುವುದಿಲ್ಲ. ಅದಕ್ಕೆ ತಜ್ಞ ವೈದ್ಯರು ಅಗತ್ಯ. ಹೀಗಾಗಿ ಸುಸಜ್ಜಿತ ಆಸ್ಪತ್ರೆ ಜೊತೆ ಮೆಡಿಕಲ್ ಕಾಲೇಜು ಸಹ ಸ್ಥಾಪಿಸಬೇಕು. ಶಿರಸಿ ಹಾಗೂ ಕುಮಟಾದಲ್ಲಿ ಆರೋಗ್ಯ ಸೇವೆ ದೊರೆಯಬೇಕು’ ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.
ಈಗಿರುವ ಕಾಲೇಜು ಉಪಯೋಗಕ್ಕಿಲ್ಲ!
`ಕಾರವಾರದಲ್ಲಿ ಈಗಾಗಲೇ ಮೆಡಿಕಲ್ ಕಾಲೇಜು ಇದೆ. ಆದರೆ, ಅದು ಸೂಕ್ತ ಸ್ಥಳದಲ್ಲಿರದ ಕಾರಣ ಜನರಿಗೆ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಪ್ರತ್ಯೇಕ ಕಾಲೇಜು ಜೊತೆಗೆ ಆಸ್ಪತ್ರೆ ನಿರ್ಮಾಣವಾಗಬೇಕು’ ಎಂದವರು ಪುನರುಚ್ಚರಿಸಿದ್ದಾರೆ.
ಹೋರಾಟ ನಿರಂತರ!
`ಒoದು ವರ್ಷದ ಹಿಂದೆ ನಡೆದ ಹೋರಾಟಕ್ಕೆ ಸರ್ಕಾರ ಇದೀಗ ಪ್ರತಿಕ್ರಿಯೆ ನೀಡಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಪ್ರತಿಕ್ರಿಯಿಸಿದ್ದಾರೆ.
ಆಸ್ಪತ್ರೆ ಹೋರಾಟದ ಬಗ್ಗೆ ಅನಂತಮೂರ್ತಿ ಹೆಗಡೆ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..