ಯಲ್ಲಾಪುರ: ರಸ್ತೆ ಅಂಚಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯವರೇ ಅಕ್ರಮವಾಗಿ ಮಣ್ಣು ತೆಗೆದಿದ್ದಾರೆ. ಸೋಮವಾರ ಬೆಳಗ್ಗೆ ನಾಲ್ಕು ಟಿಪ್ಪರ್ ಹಾಗೂ ಎರಡು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆಗೆಯಲಾಗಿದ್ದು, ಸಾರ್ವಜನಿಕರ ವಿರೋಧದ ಮೇರೆಗೆ ಮಧ್ಯಾಹ್ನ ಮಣ್ಣು ಅಗೆಯುವ ಕೆಲಸವನ್ನು ಸ್ಥಗಿತಗೊಳಿಸಲಾಯಿತು.
ಯಲ್ಲಾಪುರ ತಾಲೂಕಿನ ತಟಗಾರ ಗ್ರಾಮ ಪ್ರವೇಶಿಸುವ ರಬ್ದಮನೆ ಘಟ್ಟದಲ್ಲಿ ಮಣ್ಣು ತೆಗೆಯುವ ಕೆಲಸ ನಡೆಯುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ `ನರ್ಸರಿಯಲ್ಲಿ ಗಿಡ ಬೆಳೆಸುವ ಉದ್ದೇಶಕ್ಕಾಗಿ ಈ ಮಣ್ಣು’ ಎಂಬ ಸಬೂಬು ನೀಡಿದ್ದರು. ಆದರೆ, ನರ್ಸರಿ ಇರುವ ದಿಕ್ಕು ಹೊರತುಪಡಿಸಿ ಬೇರೆ ಕಡೆ ಮಣ್ಣು ತುಂಬಿದ ಲಾರಿಗಳು ಚಲಿಸುವುದನ್ನು ಗಮನಿಸಿ ಜನ ಅನುಮಾನ ವ್ಯಕ್ತಪಡಿಸಿದರು.
ಬೇರೊಂದು ಊರಿನಲ್ಲಿ ದೇವಾಲಯವೊಂದನ್ನು ಕಟ್ಟುವಾಗ `ದೇವಸ್ಥಾನ ಕೆಲಸಕ್ಕೆ’ ಎಂದು ತಿಳಿಸಿ ಕಲ್ಲು-ಮಣ್ಣು ಹಾಗೂ ಮರವನ್ನು ವೈಯಕ್ತಿಕ ಬಳಕೆಗೆ ತೆಗೆದುಕೊಂಡು ಹೋಗಿದ್ದನ್ನು ಕೆಲವರು ಈ ವೇಳೆ ಸ್ಮರಿಸಿದರು. `ಇದು ಅದೇ ರೀತಿ’ ಎಂದು ಅಲ್ಲಿದ್ದವರು ಮಾತನಾಡಿಕೊಂಡರು. ಊರಿನ ಜನ ರಸ್ತೆಗೆ ಮಣ್ಣು ಹಾಕಿಕೊಳ್ಳಲು ತಕರಾರು ಮಾಡುವ ಅರಣ್ಯ ಸಿಬ್ಬಂದಿ ಇದೀಗ ರಾಜಾರೋಷವಾಗಿ ಯಂತ್ರಗಳನ್ನು ಬಳಸಿ ಮಣ್ಣು ತೆಗೆದ ಬಗ್ಗೆ ಜನ ಆಕ್ರೋಶವ್ಯಕ್ತಪಡಿಸಿದರು.
`ಆರು ತಿಂಗಳ ಹಿಂದೆ ಆನಗೋಡದಲ್ಲಿ ಮಣ್ಣು ಬರಗಿದ ಜೆಸಿಬಿ ಯಂತ್ರವನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಕಾನೂನು ಕ್ರಮ ಜರುಗಿಸಿದ್ದರು. ಆದರೆ, ಇಲ್ಲಿ ಅರಣ್ಯ ಅಧಿಕಾರಿ-ಸಿಬ್ಬಂದಿಯೇ ಅರಣ್ಯ ನಾಶ ಮಾಡಿದರೂ ಕೇಳುವವರಿಲ್ಲ’ ಎಂದು ಜನ ದೂರಿದರು. `ನರ್ಸರಿಗೆ ಮಣ್ಣು ಬೇಕಾದರೆ ಮಾಲ್ಕಿ ಪ್ರದೇಶದಲ್ಲಿ ಪಡೆಯಬಹುದಾಗಿತ್ತು. ಸೊಪ್ಪಿನ ಬೆಟ್ಟದ ಮಣ್ಣನ್ನು ಪಡೆಯಬಹುದಿತ್ತು’ ಎಂದು ಕೆಲವರು ಹೇಳಿದರು.
ಇನ್ನೂ ಈ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬೀಳುತ್ತಿದ್ದು, ಅರಣ್ಯ ಇಲಾಖೆಯವರು ಗುಡ್ಡದ ಮಣ್ಣು ಅಗೆದಿದ್ದರಿಂದ ತ್ಯಾಜ್ಯ ಎಸೆಯುವವರಿಗೆ ಇನ್ನಷ್ಟು ಜಾಗ ಸಿಕ್ಕಿದೆ. ಗುಡ್ಡದ ಬುಡದಲ್ಲಿದ್ದ ಸಣ್ಣಪುಟ್ಟ ಗಿಡ-ಮರಗಳು ಮಣ್ಣಿನ ಜೊತೆ ಮಣ್ಣಾಗಿದೆ. `ನರ್ಸರಿಗೆ ಅಲ್ಪ ಪ್ರಮಾಣದ ಮಣ್ಣು ಕಡಿಮೆ ಬಿದ್ದಿತ್ತು. ಹೀಗಾಗಿ ಅಲ್ಲಿಂದ ಪಡೆದಿದ್ದು, ಮಣ್ಣು ಸರಿಯಿಲ್ಲದ ಕಾರಣ ಅಗೆಯುವುದನ್ನು ನಿಲ್ಲಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ನರೇಶ ತಿಳಿಸಿದರು.