ಕಾರವಾರ: ಶಾಸಕ ಸತೀಶ್ ಸೈಲ್ ಹಾಗೂ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು ನಡುವೆ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಈ ಪಂದ್ಯಾವಳಿಯಲ್ಲಿ ಯಾರೂ ಗೆಲ್ಲಲಿಲ್ಲ.. ಯಾರೂ ಸೋಲಲಿಲ್ಲ. ಅಸಲಿಗೆ ಅವರಿಬ್ಬರು ಚೆಸ್ ಆಟವನ್ನೇ ಆಡಲಿಲ್ಲ. ಬದಲಾಗಿ ಚೆಸ್ ಆಟ ಆಡಿದಂತೆ ನಟಿಸಿ ಫೋಟೋಶೂಟ್ ನಡೆಸಿದರು!
ಸೋಮವಾರ ಚಿತ್ತಾಕುಲದಲ್ಲಿ ಸತೀಶ್ ಸೈಲ್ ಚೆಸ್ ಕ್ಲಬ್ ಉದ್ಘಾಟಿಸಿದರು. ಅದಾದ ನಂತರ ಈಶ್ವರ ಕಾಂದು ಅವರ ಎದುರು ಕೂತು ಚೆಸ್ ಆಡಲು ಶುರು ಮಾಡಿದರು. ಕೆಲ ಕಾಯಿಗಳನ್ನು ಅಡ್ಡಾದಿಡ್ಡಿ ಚಲಿಸಿದ ಇಬ್ಬರಿಗೂ ಚೆಸ್ ಆಟದಲ್ಲಿ ಮನಸ್ಸಿರಲಿಲ್ಲ. ಹೀಗಾಗಿ ಆ ಆಟವನ್ನು ಅಲ್ಲಿಯೇ ಮೊಟಕುಗೊಳಿಸಿ ಚೆಸ್ ಆಟದ ಕುರಿತು ಭಾಷಣ ಮಾಡಿ ಕಾರ್ಯಕ್ರಮ ಮುಗಿಸಿದರು!
`ಬಾಲ್ಯದಿಂದಲೇ ಚೆಸ್ ಆಡುವುದರಿಂದ ಮಕ್ಕಳಲ್ಲಿ ಕಲಿಕೆ, ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಂದ ವಯೋವೃದ್ಧರವರೆಗೂ ಚೆಸ್ ಪಾರ್ಕ್ನ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. `ಚೆಸ್ ಕೇವಲ ಆಟವಲ್ಲ. ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಗುರಿ ಸಾಧಿಸುವ ಪಾಠವನ್ನು ಅದು ಕಲಿಸುತ್ತದೆ’ ಎಂದರು.
ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ `ಚೆಸ್ ಪಾರ್ಕ್ನ ಉಪಯೋಗವನ್ನು ಎಲ್ಲರೂ ಪಡೆಯಬೇಕು. ಚೆಸ್ ಕೇವಲ ಆಟವಲ್ಲ. ಯಾವ ಹಂತದಲ್ಲಿ ಯಾವ ಕಾಯಿ ಮುನ್ನೆಡಸಬೇಕು? ಯಾವ ರೀತಿ ಆಡಬೇಕು ಎನ್ನುವುದರ ಯೋಜನೆ ರೂಪಿಸಿ ಆಡುವ ಆಟವಾಗಿದೆ. ಈ ಆಟ ಜೀವನಕ್ಕೂ ಅನ್ವಯವಾಗುತ್ತದೆ’ ಎಂದರು. `ಜೀವನದಲ್ಲಿ ಯಾವ ಸಮಯದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಈ ಆಟ ಕಲಿಸುತ್ತದೆ. ಈ ಆಟದಿಂದ ಬುದ್ದಿಮತ್ತೆ ಹೆಚ್ಚಾಗಿ ಜವಾಬ್ದಾರಿಯುತ ಮನುಷ್ಯನಾಗಲು ಸಾಧ್ಯ’ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಪಂಚಾಯತದ ನಿವೃತ್ತ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ತಾಲೂಕು ಪಂಚಾಯತ ಆಡಳಿತಾಧಿಕಾರಿ ಸೋಮಶೇಖರ ಮೆಸ್ತಾ, ಕಾರ್ಯನಿರ್ವಹಣಾಧಿಕಾರಿ ವೀರನಗೌಡ, ಚಿತ್ತಾಕುಲ ಗ್ರಾಮ ಪಂಚಾಯತ ಅಧ್ಯಕ್ಷ ನಿತೀನ ಬಾಂದೇಕರ, ಉಪಾಧ್ಯಕ್ಷ ಸೂರಜ ದೇಸಾಯಿ ಇದ್ದರು.