ಕಾರವಾರ: ಬಿಣಗಾ ಗ್ರಾಮದ ಬಿರ್ಲಾ ಗ್ರಾಸೀಂ ಇಂಡಸ್ಟ್ರೀಸ್’ನಲ್ಲಿ ಕ್ಲೋರಿನ್ ಸೋರಿಕೆಯಾದ ಹಿನ್ನಲೆ ಘಟಕದ ಸುತ್ತಲು ನಿಷೇಧಾಜ್ಞೆ ಜಾರಿಯಾಗಿದೆ. ಇದರೊಂದಿಗೆ ಉತ್ಪಾದನಾ ಚಟುವಟಿಕೆಯನ್ನು ಸಹ ಸ್ಥಗಿತಗೊಳಿಸಲಾಗಿದೆ.
ಶನಿವಾರ ಮಧ್ಯಾಹ್ನ ಇಲ್ಲಿ ಕ್ಲೋರಿನ್ ಸೋರಿಕೆ ಪರಿಣಾಮ 19 ಜನ ಅಸ್ವಸ್ಥರಾಗಿದ್ದು, ಆ ಪೈಕಿ 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದ ಐದು ಜನರನ್ನು ಆದಿತ್ಯಾ ಬಿರ್ಲಾ ಗ್ರಾಸೀಂ ಕಾರ್ಖಾನೆಯ ಒಳಾಂಗಣದಲ್ಲಿರುವ ಆಸ್ಪತ್ರೆಗೆ ದಾಖಲಿಸಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಾರ್ಮಿಕರು ಇದೀಗ ಚೇತರಿಸಿಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಕಾರ್ಮಿಕರನ್ನು 24 ಗಂಟೆಗಳ ಕಾಲ ನಿಗಾ ಘಟಕದಲ್ಲಿರಿಸಲಾಗಿದೆ.
ಇನ್ನೂ ಕ್ಲೋರಿನ್ ಸೋರಿಕೆ ನಡೆದ ದಿನ ಕೈಗಾರಿಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಖಾನೆಯ ಆಡಿಟ್ ನಡೆಸಿ ಸುರಕ್ಷತಾ ಕ್ರಮದ ಬಗ್ಗೆ ಅವರು ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿಗೆ ವರದಿ ಸಲ್ಲಿಸಲಿದ್ದಾರೆ.




