ಶಿರಸಿ: ಎಲ್ಲರಿಗಿಂತಲೂ 10 ವರ್ಷ ಮುಂಚಿತವಾಗಿ ಯೋಚಿಸಿ ಮನಸಲ್ಲಿ ಅಂದುಕೊoಡಿದ್ದನ್ನು ಸಾಧಿಸಿ ತೋರಿಸುವ ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಇದೀಗ ನ್ಯಾನ್ಯೋ ಟೆಕ್ನಾಲಜಿ ಹಿಂದೆ ಬಿದ್ದಿದ್ದಾರೆ. ರಾಜಕೀಯ ಪಡಸಾಲೆಯಿಂದ ದೂರವಿರುವ ಅವರು ಗ್ರೀನ್ ನ್ಯಾನೋ ಟೆಕ್ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದಾರೆ.
ಅನಂತಕುಮಾರ ಹೆಗಡೆ ಅವರು ಆರು ಬಾರಿ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಸಂಸದರಾಗಿದ್ದರು. ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಅವರು ಒಮ್ಮೆ ಕೌಶಲ್ಯಾಭಿವೃದ್ಧಿ ಸಚಿವರು ಆದರು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಬಿಜೆಪಿಯ ಬಿ ಪಾರಂ ಸಿಗಲಿಲ್ಲ. ಹೀಗಾಗಿ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲ. ರಾಜಕೀಯದಿಂದ ದೂರವುಳಿದ ಅನಂತಕುಮಾರ ಹೆಗಡೆ ತಮ್ಮ ನಿರಂತರ ಅಭ್ಯಾಸ, ಸಂಶೋಧನೆ ಮುಂದುವರೆಸಿದ್ದು ತಮ್ಮ ಕದಂಬ ಸಂಸ್ಥೆಯ ಮೂಲಕ ಇದೀಗ ಗ್ರೀನ್ ನ್ಯಾನೋ ಟೆಕ್ ಕ್ಷೇತ್ರದಲ್ಲಿ ಕೆಲಸ ಶುರು ಮಾಡಿದ್ದಾರೆ.
ಬೆಂಗಳೂರಿನ ಜಯನಗರ 4ನೇ ಬ್ಲಾಕ್‌ನಲ್ಲಿ ವಿಶ್ವದ ಮೊದಲ ಗ್ರೀನ್ ನ್ಯಾನೋ ವೈದ್ಯಕೀಯ ಕೇಂದ್ರವನ್ನು ಅನಂತಕುಮಾರ್ ಹೆಗಡೆ ಅವರು ಕದಂಬ ಸಂಸ್ಥೆಯಡಿ ಸ್ಥಾಪಿಸಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಔಷಧ ಅಭಿವೃದ್ಧಿಪಡಿಸಿದ್ದು, ಆಯುರ್ವೇದದಲ್ಲಿ ತಿಳಿಸಿರುವ ಗಿಡಮೂಲಿಕೆಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸಿದ್ದಾರೆ. ಡಾ ಕಟ್ಟೇಶ್ ಕಟ್ಟಿ ಅವರ ಜೊತೆ ಸೇರಿ ಗ್ರೀನ್ ನ್ಯಾನೋ ಕೇರ್ ಔಷಧ, ಸೌಂದರ್ಯ ವರ್ಧಕ, ತಿನಿಸುಗಳ ತಯಾರಿಕೆಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಉತ್ಪನ್ನಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆಯಿದ್ದು, ಅದನ್ನು ರಪ್ತು ಮಾಡುತ್ತಿದ್ದಾರೆ. ವೇದಿಕ್ ಜ್ಞಾನವನ್ನು 21ನೇ ಶತಮಾನದ ತಂತ್ರಜ್ಞಾನಕ್ಕೆ ಹೊಂದಿಸಲು ಗ್ರೀನ್ ನ್ಯಾನೋ ರಿಯಾಕ್ಟರ್’ನ್ನು ಅವರು ಸ್ಥಾಪಿಸಿದ್ದಾರೆ.
ಗ್ರೀನ್ ನ್ಯಾನೋ ತಂತ್ರಜ್ಞಾನದ ನೆರವಿನಿಂದ ನ್ಯಾನೋ ಗಾತ್ರದ ಔಷಧಗಳು ತಯಾರಿಕೆಯಾಗುತ್ತಿವೆ. ಬಂಗಾರ, ಬೆಳ್ಳಿಯಂಥ ಲೋಹದ ಕಣಗಳನ್ನು ಔಷಧದಲ್ಲಿ ಬಳಕೆ ಮಾಡುವ ಪರಂಪರೆಯನ್ನು ಇದು ಒಳಗೊಂಡಿದೆ. `ಆಯುರ್ವೇದ ಪದ್ಧತಿಗಳಲ್ಲೂ ಚಿನ್ನವನ್ನು ಭಸ್ಮದ ರೂಪದಲ್ಲಿ ಚಿಕಿತ್ಸೆಗೆ ಬಳಸುತ್ತಿದ್ದರು. ಅದಕ್ಕೆ ರಜತ ಭಸ್ಮ, ಸ್ವರ್ಣಭಸ್ಮ ಎಂಬ ಹೆಸರಿದ್ದು, ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಚಿನ್ನ ಮತ್ತು ನ್ಯಾನೋ ಕಣಗಳನ್ನು ನ್ಯಾನೋ ಕೇರ್ ಔಷಧಗಳಲ್ಲಿ ಹದಗೊಳಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇವೆ’ ಡಾ. ಕಟ್ಟೇಶ್ ಕಟ್ಟಿ ಹೇಳಿದ್ದಾರೆ.