ಕಾರವಾರ: ಕಾಂಗ್ರೆಸ್ ಚಿಹ್ನೆಯ ಅಡಿ ಆಯ್ಕೆಯಾದ ಶಾಸಕ ಸತೀಶ್ ಸೈಲ್ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಕಚೇರಿಯನ್ನು ಹೊಂದಿಲ್ಲ. ಅದಾಗಿಯೂ ಕಾರವಾರಕ್ಕೆ ಭೇಟಿ ನೀಡುವ ಸಚಿವರೆಲ್ಲರೂ `ಕಾಂಗ್ರೆಸ್ ಕಚೇರಿಗೆ ಭೇಟಿ’ ಎಂದು ಸಮಯ ನಿಗದಿ ಮಾಡುತ್ತಿದ್ದು, ಇಲ್ಲದ ಕಚೇರಿಗೆ ಸಚಿವರು ಭೇಟಿ ನೀಡುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡುತ್ತಿದೆ!
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಎರಡು ತಿಂಗಳ ಅವಧಿಗೆ ಬಾಡಿಗೆ ಕಚೇರಿ ತೆರೆಯುತ್ತದೆ. ಚುನಾವಣೆ ಮುಗಿದ ಮರುದಿನವೇ ಆ ಕಚೇರಿ ಬಾಗಿಲು ಮುಚ್ಚುತ್ತದೆ. ಅದಾಗಿಯೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಾರವಾರದಲ್ಲಿ ತಮ್ಮ ಪಕ್ಷದ ಕಚೇರಿಯಿದೆ ಎಂದು ನಂಬಿದೆ. ಇದಕ್ಕಾಗಿ ಕಾರವಾರಕ್ಕೆ ಭೇಟಿ ನೀಡುವ ಸಚಿವರಿಗೆ `ಕಾಂಗ್ರೆಸ್ ಕಚೇರಿಗೆ ತೆರಳಿ ಕಾರ್ಯಕರ್ತರನ್ನು ಮಾತನಾಡಿಸಿ’ ಎಂಬ ಸೂಚನೆ ನೀಡಿದೆ. ಈ ಹಿನ್ನಲೆ ಸಚಿವರು ಸಹ ತಮ್ಮ ಕಾರ್ಯಕ್ರಮಗಳ ಪಟ್ಟಿಯಲ್ಲಿ `ಕಾಂಗ್ರೆಸ್ ಕಚೇರಿ ಭೇಟಿ’ ಎಂದು ಸಮಯ ನಿಗದಿ ಮಾಡಿಕೊಳ್ಳುತ್ತಾರೆ. ಕಾರವಾರಕ್ಕೆ ತಲುಪಿದ ನಂತರವೇ ಅವರಿಗೆ ಇಲ್ಲಿ ಕಾಂಗ್ರೆಸ್ ಕಚೇರಿಯೇ ಇಲ್ಲ ಎಂಬ ಸತ್ಯ ಅರಿವಾಗುತ್ತದೆ!
ಪ್ರತಿ ಬಾರಿ ಸಚಿವರ ಪ್ರವಾಸ ಪಟ್ಟಿಯಲ್ಲಿಯೂ `ಕಾಂಗ್ರೆಸ್ ಕಚೇರಿಗೆ ಭೇಟಿ’ ಎಂದು ಸಮಯ ನಿಗದಿಯಾಗುತ್ತದೆ. ಆದರೆ, ಈವರೆಗೂ ಯಾವ ಸಚಿವರು ಆ ಕಚೇರಿ ನೋಡಿಲ್ಲ. ಪ್ರವಾಸ ಪಟ್ಟಿಯಲ್ಲಿರುವ ಕಚೇರಿ ಎಲ್ಲಿದೆ? ಎಂದು ಕಾಂಗ್ರೆಸ್ ಕಾರ್ಯಕರ್ತರೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಕೆಲವರು `ಶಾಸಕರ ಕಚೇರಿಯೇ ಕಾಂಗ್ರೆಸ್ ಕಚೇರಿ’ ಎನ್ನುತ್ತಾರೆ. ಆದರೆ, `ಸರ್ಕಾರಿ ಕಚೇರಿ ಪಕ್ಷದ ಕಾರ್ಯಾಕಯ ಹೇಗಾಗುತ್ತೆ?’ಎಂದು ಮರು ಪ್ರಶ್ನೆ ಹಾಕುವವರು ಇದ್ದಾರೆ. ಇನ್ನೂ ಕೆಲವರು `ಸತೀಶ್ ಸೈಲ್ ಅವರ ಮನೆಯೇ ಪಕ್ಷದ ಕಚೇರಿ’ ಎನ್ನುತ್ತಾರೆ. ಆದರೆ, ಅದು ಅವರ ಖಾಸಗಿ ಗೃಹ ಕಚೇರಿ ಮಾತ್ರ. ಅಲ್ಲಿ ಎಲ್ಲಿಯೂ ಕಾಂಗ್ರೆಸ್ ಬಾವುಟವೂ ಹಾರಾಡುತ್ತಿಲ್ಲ’ ಎನ್ನುವವರು ಇದ್ದಾರೆ. ಹೀಗಾಗಿ ಎರಡು ಬಾರಿ ಶಾಸಕರಾಗಿ ಪ್ರಸ್ತುತ ನಿಗಮ ಮಂಡಳಿಯೊAದರ ಅಧ್ಯಕ್ಷರಾದರೂ ಸತೀಶ್ ಸೈಲ್ ಅವರಿಗೆ ಪಕ್ಷಕ್ಕಾಗಿ ಒಂದು ಶಾಶ್ವತ ಕಚೇರಿ ಮೀಸಲಿಡಲು ಸಾಧ್ಯವಾಗಲಿಲ್ಲ!
ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಕಚೇರಿಯಿದೆ. ವಿವಿಧ ಗಣ್ಯರು ಹಾಗೂ ಸಚಿವರು ಭೇಟಿ ನೀಡಿದಾಗ ಆ ಕಚೇರಿಗೆ ತೆರಳಿ ಜನರ ಜೊತೆ ಬೆರೆಯುತ್ತಾರೆ. ಪಕ್ಷದ ಕಾರ್ಯಕರ್ತರು ಸಹ ಸಚಿವರ ಜೊತೆ ಅಲ್ಲಿ ಸಮಾಲೋಚನೆ ನಡೆಸುತ್ತಾರೆ. ಆದರೆ, ಕಾರವಾರದಲ್ಲಿ ಮಾತ್ರ ಕಾಂಗ್ರೆಸ್ಸಿಗೆ ಅಧಿಕೃತ ಕಚೇರಿ ಇಲ್ಲ. ಅದಾಗಿಯೂ ಸಚಿವರ ಪ್ರವಾಸ ಪಟ್ಟಿಯಲ್ಲಿ `ಕಾಂಗ್ರೆಸ್ ಕಚೇರಿ ಭೇಟಿ’ ಎಂದು ಸಮಯ ನಿಗದಿ ಮಾಡುವುದು ತಪ್ಪಿಲ್ಲ!