ಉತ್ತರ ಕನ್ನಡ ಜಿಲ್ಲೆಯನ್ನು ವಿಭಾಗಿಸಿ ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಒಬ್ಬರೇ ಒಬ್ಬರು ಸಹ ಜಿಲ್ಲೆ ಒಡೆಯುವುದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಕಾರಣ, ವಿರೋಧ ವ್ಯಕ್ತಪಡಿಸುವವರಿಗೆ ಈ ಸಭೆಗೆ ಅಧಿಕೃತ ಆಹ್ವಾನವೇ ಇರಲಿಲ್ಲ!
ಈ ಪೂರ್ವಭಾವಿ ಸಭೆಯಲ್ಲಿ ಹಿರಿಯ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಗ್ರಾಮೀಣ ಭಾಗದ ಸಾಮಾನ್ಯ ಜನ ಸಹ ಸೇರಿರಲಿಲ್ಲ. ಒಬ್ಬರನ್ನು ಹೊರತುಪಡಿಸಿ ಬೇರೆ ಮಹಿಳೆಯರು ಯಾರೂ ಕಾಣಲಿಲ್ಲ. ಜಾಲತಾಣದಲ್ಲಿ ಅಭಿಪ್ರಾಯ ಮಂಡಿಸುವರು ಇಲ್ಲಿ ಹಾಜರಿರಲಿಲ್ಲ. `ಪ್ರತ್ಯೇಕ ಜಿಲ್ಲೆ ಎಂಬುದು ರಾಜಕೀಯ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾ’ ಎಂದು ವಾದಿಸುವವರು ಹಲವರಿದ್ದರೂ ಈ ಸಭೆಯಲ್ಲಿ ಅವರ ಧ್ವನಿ ಕೇಳಲಿಲ್ಲ. ಹಲವು ವರ್ಷಗಳಿಂದ ಪ್ರತ್ಯೇಕ ಜಿಲ್ಲೆಗೆ ಹೋರಾಟ ನಡೆಸುತ್ತಿದ್ದವರನ್ನು ಈ ಸಭೆ ವಿಶ್ವಾಸಕ್ಕೆ ಪಡೆದಂತೆ ಕಾಣಲಿಲ್ಲ. ಮಧ್ಯಾಹ್ನ 3 ಗಂಟೆಗೆ ಕರೆದ ಸಭೆ 4 ಗಂಟೆಗೂ ಶುರುವಾಗದ ಕಾರಣ ಒಂದಷ್ಟು ಜನ ಮನೆಗೆ ಮರಳಿದ್ದರು.
ಮಂಗಳವಾರ ಮಧ್ಯಾಹ್ನ ನಡೆದ ದುಂಡುಮೇಜಿನ ಈ ಸಭೆಯಲ್ಲಿ ಪ್ರತ್ಯೇಕ ಜಿಲ್ಲೆ ರಚನೆ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಕೊನೆಗೂ ಜಿಲ್ಲಾಕೇಂದ್ರ ಹಾಗೂ ಜಿಲ್ಲೆಯ ಹೆಸರಿನ ಬಗ್ಗೆ ಅಂತಿಮ ನಿರ್ಧಾರವಿಲ್ಲದೇ ಸಭೆ ಅಂತ್ಯಗೊoಡಿತು. ಈ ಸಭೆಯಲ್ಲಿ ಭಾಗವಹಿಸಿದವರು ಹೊಸ ಜಿಲ್ಲೆಗೆ ಯಾವ ಹೆಸರು ಸೂಕ್ತ? ಜಿಲ್ಲಾ ಕೇಂದ್ರ ಯಾವುದಾಗಬೇಕು? ಎಂಬ ಕುರಿತು ಚರ್ಚೆ ನಡೆಸಿದರು. ಇದಕ್ಕೆ ಒಬ್ಬೊಬ್ಬರು ಒಂದೊ0ದು ರೀತಿ ಅಭಿಪ್ರಾಯ ಮಂಡಿಸಿದರು. `ಯಲ್ಲಾಪುರ ಜಿಲ್ಲಾಕೇಂದ್ರ ಆಗಿರಲಿ’ ಎಂದು ಯಲ್ಲಾಪುರದ ಜನ ಅಭಿಪ್ರಾಯಪಟ್ಟರು. `ಶಿರಸಿ ಜಿಲ್ಲಾಕೇಂದ್ರ ಆದರೂ ಸಮಸ್ಯೆ ಇಲ್ಲ’ ಎಂದು ಹೊಳೆ ಆ ಕಡೆ ದಿಕ್ಕಿನ ಜನ ತಮ್ಮ ಅಭಿಪ್ರಾಯ ಹೇಳಿಕೊಂಡರು.
`ಹೊಸ ಜಿಲ್ಲೆಗೆ ಉತ್ತರ ಕನ್ನಡ ಎಂಬ ಹೆಸರು ಮುಂದುವರೆಯಲಿ. ಕರಾವಳಿ ಭಾಗದವರು ಬೇಕಾದರೆ ಪ್ರತ್ಯೇಕ ಹೆಸರು ಮಾಡಿಕೊಳ್ಳಲಿ’ ಎಂದು ಸಭೆಯಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ಹೇಳಿದರು. `ಕದಂಬ ಕನ್ನಡ ಜಿಲ್ಲೆ ಎಂಬ ಹೆಸರು ಆಯ್ಕೆ ಮಾಡಲಾಗಿದ್ದು, ಅದಕ್ಕೆ ನಮ್ಮ ವಿರೋಧವಿಲ್ಲ’ ಎಂದು ಮತ್ತೊಬ್ಬರು ಹೇಳಿದರು.
`ಯಲ್ಲಾಪುರ ಪ್ರದೇಶದ ಅಭಿವೃದ್ಧಿಗೆ ಮೊದಲಿನಿಂದಲೂ ಶಿರಸಿಯ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಪರಿಸರದ ಹೆಸರಿನಲ್ಲಿ ವಿರೋಧಿಸುವವರು ಶಿರಸಿ-ಹಾವೇರಿ ರೈಲ್ವೇ ಯೋಜನೆಗಳಿಗೆ ಎಂದಿಗೂ ವಿರೋಧಿಸಿಲ್ಲ. ಇದೀಗ ಯಲ್ಲಾಪುರ ಜಿಲ್ಲಾಕೇಂದ್ರ ಆಗುವುದಕ್ಕಾಗದರೂ ವಿರೋಧ ಮಾಡಬೇಡಿ’ ಎಂದು ಸಭೆಯ ಅಧ್ಯಕ್ಷತೆವಹಿಸಿದ್ದ ನಿವೃತ್ತ ಪ್ರಾಚಾಯ ಶ್ರೀರಂಗ ಕಟ್ಟಿ ಹೇಳಿದರು.
`ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ,ಹಳಿಯಾಳ, ಜೋಯಿಡಾ ತಾಲೂಕು ಒಳಗೊಂಡು ಘಟ್ಟದ ಮೇಲಿನ ಪ್ರದೇಶಗಳನ್ನು ಸೇರಿಸಿ ಹೊಸದಾಗಿ ಕದಂಬ ಕನ್ನಡ ಜಿಲ್ಲೆ ರಚಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಹೇಳಿದರು. `ಸುಸಜ್ಜಿತ ಆಸ್ಪತ್ರೆಗಾಗಿ ಪ್ರತ್ಯೇಕ ಜಿಲ್ಲೆ ಅನಿವಾರ್ಯ’ ಎಂದವರು ಪ್ರತಿಪಾದಿಸಿದರು.
ಪ್ರಮುಖರಾದ ಎಂ ಎಂ ಭಟ್ಟ ಬಕ್ಕಳ, ಎಂ ಆರ್ ಹೆಗಡೆ, ಡಿ ಶಂಕರ ಭಟ್ಟ, ಎನ್ ಕೆ ಭಟ್ಟ ಅಗ್ಗಾಶಿಕುಂಬ್ರಿ, ಡಿ ಎನ್ ಗಾಂವ್ಕರ್, ಗಣೇಶ ಹೆಗಡೆ, ಸುಬ್ರಹ್ಮಣ್ಯ ಹೆಗಡೆ, ರವಿ ಕೈಟ್ಕರ್, ಆರ್ ಜಿ ಹೆಗಡೆ ಬೆದೆಹಕ್ಲ, ಯಂಕಣ್ಣ ಕಾರೇಮನೆ, ರಾಮಕೃಷ್ಣ ಭಟ್ಟ ದುಂಡಿ, ಪ್ರಸಾದ ಹೆಗಡೆ ಇತರರು ಸಭೆಯಲ್ಲಿದ್ದರು.



